ಮದುವೆ ಮುಗಿಸಿ ಉತ್ಸಾಹದಿಂದ ಮರಳುತ್ತಿದ್ದ ಮಂದಿಯನ್ನು ಹೊತ್ತೊಯ್ದಿದ್ದ ಪಿಕ್‌ಅಪ್ ವ್ಯಾನೊಂದು ಟ್ರಕ್ಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 24 ಮಂದಿ ಸಾವಿಗೀಡಾಗಿರುವ ದಾರುಣ ಘಟನೆ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.
ಜೋಧ್‌ಪುರದಿಂದ ಸುಮಾರು 130 ಕಿ.ಮೀ. ದೂರದಲ್ಲಿರುವ ದೆಕ್ಕು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸೆತ್ರಾವಾದಿಂದ ಮರಳುತ್ತಿದ್ದ ಸಂದರ್ಭದಲ್ಲಿ ದೆಕ್ಕು ಎಂಬಲ್ಲಿ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಮೃತರಲ್ಲಿ ಎಂಟು ಮಹಿಳೆಯರು ಹಾಗೂ ನಾಲ್ಕು ಮಕ್ಕಳೂ ಸೇರಿದ್ದಾರೆ. ಮೃತರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಅಪಘಾತಕ್ಕೆ ನಿರ್ದಿಷ್ಟ ಕಾರಣಗಳು ಇನ್ನೂ ಯಾವುದು ಎಂದು ತಿಳಿದುಬಂದಿಲ್ಲ ಎಂದು ತಿಳಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್, ಘಟನೆಯಲ್ಲಿ, ಒಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ವ್ಯಾನ್‌ನಲ್ಲಿ ಜನರನ್ನು ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಗಳನ್ನು ಗುರುತಿಸಲಾಗಿದ್ದು, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ಮಹಾ ನಿರ್ದೇಶಕ ರಾಜೀವ್ ದಾಸೋತ್, ಜಿಲ್ಲಾಧಿಕಾರಿ ನರೇಶ್ ಪಾಲ್ ಗಂಗಾವರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
|