ಸರಬ್‌ಜಿತ್ ಮರಣದಂಡನೆ ಕುರಿತಂತೆ ಯಾವುದೇ ಕ್ಷಮಾದಾನ ಅರ್ಜಿಯು ಅಧ್ಯಕ್ಷ ಪರ್ವೇಜ್ ಮುಷರಫ್ ಬಳಿ ಬಾಕಿ ಇಲ್ಲ ಎಂದು ಅಧ್ಯಕ್ಷರ ವಕ್ತಾರ ರಶೀದ್ ಖುರೇಶಿ ಗುರುವಾರ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಯು, ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಅನ್ಸರ್ ಬರ್ನೆ ಅವರ ಹೇಳಿಕೆಗೆ ತದ್ವಿರುದ್ಧವಾಗಿದೆ. ಸರಬ್‌ಜಿತ್ ಪರ ಕ್ಷಮಾದಾನ ಕೋರಿ ಸಲ್ಲಿಸಲಾಗಿರುವ ಹೊಸ ಆರ್ಜಿಯೊಂದು ಬಾಕಿ ಇದೆ ಎಂಬುದಾಗಿ ಬರ್ನೆ ಹೇಳಿದ್ದರು.
ಭಾರತೀಯ ಪ್ರಜೆ ಸರಬ್‌ಜಿತ್‌ಗೆ ಕ್ಷಮಾದಾನ ನೀಡುವ ಕುರಿತು ಸರಕಾರ ಪರಿಗಣಿಸುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಖುರೇಶಿ, ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರಬ್‌ಜಿತ್‌ಗೆ ಮೇ ಒಂದರಂದು ಗಲ್ಲು ಶಿಕ್ಷೆ ವಿಧಿಸುವುದಾಗಿ ಪಾಕ್ ಸರಕಾರ ನಿರ್ಧರಿಸಿದೆ.
ಅದಾಗ್ಯೂ, ಕ್ಷಮಾದಾನ ಅರ್ಜಿಯನ್ನು ಅಧ್ಯಕ್ಷರ ಕಚೇರಿಗೆ ಕಳುಹಿಸಿರುವುದಾಗಿ ಸರಬ್‌ಜಿತ್ ವಕೀಲ ಅಬ್ದುಲ್ ರಾಣಾ ಹಮೀದ್ ಹೇಳಿದ್ದು, ಅದರ ಪ್ರಸಕ್ತ ಸ್ಥಿತಿಗತಿಯ ಕುರಿತು ಖಚಿತವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ.
ಕುಟುಂಬಿಕರ ಭೇಟಿಗೆ ಅನುಮತಿ ಈ ಮಧ್ಯೆ ಸರಬ್‌ಜಿತ್ ಭೇಟಿಗಾಗಿ ಆತನ ಕುಟುಂಬದವರು ಪಾಕಿಸ್ತಾನಕ್ಕೆ ತೆರಳಿದ್ದು, ಲಾಹೋರ್ ಕೋಟ್‌ನ ಲಕ್‌ಪತ್ ಜೈಲಿನಲ್ಲಿ ಅವರಿಗೆ ಭೇಟಿಯ ಅವಕಾಶ ಕಲ್ಪಿಸಲಾಗಿದೆ. "ಪಂಜಾಬ್ ಪ್ರಾಂತ್ಯ ಗೃಹ ಇಲಾಖೆಯು ಈ ಅನುಮತಿ ನೀಡಿದ್ದು, ಭೇಟಿಯ ಬಳಿಕ ನಾವು ಶೀಘ್ರ ಲಾಹೋರಿಗೆ ಮರಳಲಿದ್ದೇವೆ" ಎಂದು ಸರಬ್‌ಜಿತ್ ಸಹೋದರಿ ದಲ್‌ಬೀರ್ ಕೌರ್ ಹೇಳಿದ್ದಾರೆ.
ಸರಬ್‌ಜಿತ್ ಪತ್ನಿ ಸುಖ್‌ಪ್ರೀತ್ ಕೌರ್, ಪುತ್ರಿಯರಾದ ಸ್ವಪ್ನದೀಪ್ ಮತ್ತು ಪೂನಂ, ಹಾಗೂ ಸಹೋದರಿ ದಲ್‌ಬೀರ್ ಕೌರ್ ಹಾಗೂ ಆಕೆಯ ಪತಿ ಬಲ್‌ದೇವ್ ಸಿಂಗ್ ಅವರುಗಳು ಬುಧವಾರ ವಾಘ ಗಡಿ ದಾಟಿ ಪಾಕಿಸ್ತಾನಕ್ಕೆ ಬಂದಿದ್ದಾರೆ.
|