ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಕಾರ್ಮಿಕರ ಹಿತರಕ್ಷಣೆಯ ಸಲುವಾಗಿ ಸಾಂಸ್ಥಿಕ ಚೌಕಟ್ಟನ್ನು ಹಾಕಿ ಕೊಡುವಂತಹ ತಿಳುವಳಿಕಾ ಪತ್ರವೊಂದನ್ನು ಭಾರತ ಮತ್ತು ಮಲೇಷ್ಯಾಗಳು ಅಂತಿಮಗೊಳಿಸಿವೆ.
ಈ ತಿಳುವಳಿಕಾ ಪತ್ರ(ಕಾರ್ಮಿಕ ಮತ್ತು ಕೆಲಸಗಾರರ ಅಭಿವೃದ್ಧಿ)ಕ್ಕೆ ಸಹಿಹಾಕಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಸಾಧ್ಯವಿರುವಷ್ಟು ಬೇಗ ಉಭಯ ಸರಕಾರಗಳು ಪೂರ್ಣಗೊಳಿಸಲಿವೆ ಎಂದು ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವ ವಯಲಾರ್ ರವಿ ರಾಜ್ಯಸಭೆಗೆ ಗುರುವಾರ ತಿಳಿಸಿದ್ದಾರೆ.
ಉದ್ದೇಶಿತ ತಿಳುವಳಿಕಾ ಪತ್ರವು, ಭಾರತೀಯ ವಲಸೆ ಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಕೌಶಲ್ಯ, ಅರೆ ಕೌಶಲ್ಯ ಹಾಗೂ ಕೌಶಲ್ಯೇತರ ವರ್ಗದ ಉದ್ಯೋಗ, ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ದ್ವಿಪಕ್ಷೀಯ ಸಹಕಾರದ ಸಾಂಸ್ಥಿಕ ಚೌಕಟ್ಟನ್ನು ನಿರ್ಮಿಸಲಿದೆ ಎಂದು ಅವರು ನುಡಿದರು.
ಇದೀಗ ಮಲೇಷ್ಯಾದಲ್ಲಿ ನೆಲೆಸಿರುವ ಕಾರ್ಮಿಕರೂ, ತಿಳುವಳಿಕಾ ಪತ್ರದ ವ್ಯಾಪ್ತಿಗೆ ಬರಲಿದ್ದಾರೆ ಎಂದು ಅವರು ಹೇಳಿದರು. ಅಧಿಕಾರಿಗಳ ಮಟ್ಟದಲ್ಲಿ ಅಂತಿಮಗೊಳಿಸಲಾಗಿರುವ ತಿಳುವಳಿಕಾ ಪತ್ರವು, ಕಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಉಭಯರಾಷ್ಟ್ರಗಳ ನಡುವೆ ಉತ್ತಮ ಸಮನ್ವಯತೆಗಾಗಿ ಜಂಟಿ ಕಾರ್ಯ ಸಮೂಹ ಒಂದನ್ನು ಸ್ಥಾಪಿಸಲೂ ಅವಕಾಶ ಕಲ್ಪಿಸಲಿದೆ.
ಮಲೇಷ್ಯಾದಲ್ಲಿರುವ ಭಾರತೀಯ ಕಾರ್ಮಿಕರು ಕನಿಷ್ಠ ವೇತನಕ್ಕೆ, ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯವೆಸಗಬೇಕಾಗುತ್ತದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ಹೊಂದಿರುವ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಭಾರತವು ಅಲ್ಲಿನ ಹಲವು ರಾಷ್ಟ್ರಗಳೊಂದಿಗೆ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿವೆ.
|