ವಿರೋಧ ಪಕ್ಷಗಳು ಮತ್ತು ಎಡಪಕ್ಷಗಳು ಬೆಲೆಏರಿಕೆ ವಿಚಾರದಲ್ಲಿ ಸರಕಾರದ ವಿರುದ್ಧ ಆಕ್ರಮಣ ನಡೆಸುತ್ತಿರುವ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, 'ಭಯದ ವ್ಯಾಪಾರ'ದಿಂದ ಲಾಭಪಡೆಯದಿರುವಂತೆ ಮತ್ತು ಅಕ್ರಮ ದಾಸ್ತಾನುಗಾರರು ಹಾಗೂ ಸಟ್ಟಾವ್ಯಾಪಾರಿಗಳನ್ನು ಪ್ರಚೋದಿಸುವಂತಹ ವಾತಾವರಣವನ್ನು ಸೃಷ್ಟಿಸದಿರುವಂತೆ ರಾಜಕೀಯ ಪಕ್ಷಗಳನ್ನು ವಿನಂತಿಸಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ನೇತೃತ್ವದ ಎಡಪಕ್ಷಗಳ ನಿಯೋಗದೊಂದಿಗೆ ಬೆಲೆಏರಿಕೆ ಕುರಿತು ಮಾತುಕತೆ ನಡೆಸಿದ ಬಳಿಕ ಪ್ರಧಾನಿಯವರ ಈ ಕಟುಶಬ್ದಗಳ ಹೇಳಿಕೆ ಹೊರಬಿದ್ದಿವೆ. ಬೆಲೆ ಏರಿಕೆ ವಿಚಾರವನ್ನು ಸರಕಾರ ನಿಭಾಯಿಸುವ ರೀತಿಯನ್ನು, ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳು ಹಾಗೂ ವಿರೋಧ ಪಕ್ಷಗಳು ತೀವ್ರವಾಗಿ ಪ್ರತಿಭಟಿಸಿವೆ.
ಸರಕಾರವು ಎಲ್ಲ ಅವಶ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನುಡಿದಿರುವ ಪ್ರಧಾನಿ ಸಿಂಗ್, ರಾಜಕೀಯ ಪಕ್ಷಗಳು ಈ ಕುರಿತು ಭೀತಿ ಹುಟ್ಟಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
"ಜನತೆಯ ದುಃಖವನ್ನು ರಾಜಕೀಯಗೊಳಿಸುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು ಎಂದು ಹೇಳಿರುವ ಪ್ರಧಾನಿ, ಅಕ್ರಮ ದಾಸ್ತಾನುಗಾರರು ಮತ್ತು ಸಟ್ಟಾವ್ಯಾಪಾರಿಗಳನ್ನು ಉತ್ತೇಜಿಸುವಂತಹ ವಾತಾವರಣ ಸೃಷ್ಠಿಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ" ಎಂದು ಪ್ರಧಾನಿಯವರ ಮಾಧ್ಯಮ ಸಲಹೆಗಾರರು ಸಭೆಯ ಬಳಿಕ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಹೇಳಲಾಗಿದೆ.
ಲೋಕಸಭೆಯಲ್ಲಿ ಹಣಕಾಸು ಮಸೂದೆಗೆ ಮತಹಾಕಲು ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಎಡಪಕ್ಷಗಳು ಪ್ರಧಾನಿಯವರನ್ನು ಭೇಟಿಮಾಡಿದ್ದಾರೆ.
|