ಮುಂಬೈ: ಇದೊಂದು ಕುತೂಹಲಕಾರಿ ಪ್ರಕರಣ. ಜೌರಂಗಬಾದಿನ ವೀರ್ಯ ಬ್ಯಾಂಕಿನಿಂದ, ವೀರ್ಯ ತುಂಬಿದ್ದ ನೂರಾಒಂದು ಬಾಟಲುಗಳನ್ನು ಭೂಪನೊಬ್ಬ ಹಾರಿಸಿದ್ದು, ಮುಂಬೈಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಕಳ್ಳತನದಿಂದಾಗಿ ರೇತಸ್ಸು ಸಂಗ್ರಹದ ಈ ಬ್ಯಾಂಕು, ನಿಜವಾಗಲೂ ಏನು ಮಾಡುತ್ತಿದೆ ಮತ್ತು ಇದನ್ನು ಹೇಗೆ ಕಾಪಿಡಲಾಗುತ್ತದೆ ಎಂಬ ಅಂಶವನ್ನು ಜೌರಂಗಬಾದ್ ಪೊಲೀಸರು ವಿವರಿಸಬೇಕಿದೆ.
ಇಷ್ಟಕ್ಕೂ ಅನಿಲ್ ಮೊಹಿತೆ ಎಂಬಾತ ವಿವಿಧ ವೀರ್ಯ ನಮೂನೆಯನ್ನು ಯಾಕೆ ಕದಿಯಲು ಹೋದ ಎಂಬುದೀಗ ಎಲ್ಲರ ಕೌತುಕದ ಪ್ರಶ್ನೆ.
ಆಪಾದಿತ ಅನಿಲ್ ಹೇಳಿರುವುದಿಷ್ಟು. ನೂರು ಬಾಟಲ್‌ಗಳನ್ನು ಮುಂಬೈಗೆ ಒಯ್ಯಲು ಹೇಳಲಾಗಿದ್ದು ಇದನ್ನು ರಹಸ್ಯವಾಗಿಡುವಂತೆಯೂ ಹೇಳಲಾಗಿತ್ತು. ಬಳಿಕ ಕಾಂದಿವಿಲಿಯಲ್ಲಿರುವ ಪ್ರಯೋಗಾಲಯಕ್ಕೆ ಇವುಗಳನ್ನು ಒಪ್ಪಿಸಿದ ಬಳಿಕ ಅವರು ಇದನ್ನು ಸ್ಥಳೀಯವಾಗಿ ವಿಲೇವಾರಿ ಮಾಡುತ್ತಾರೆ. ಪ್ರತೀ ಬಾಟಲಿಗೆ ತನಗೆ 450 ರೂಪಾಯಿ ಕೊಡುವ ಭರವಸೆ ನೀಡಲಾಗಿದೆ.
ಬಂಧಿತ ಅನಿಲ್ ವಿಚಾರಣೆಯ ಬಳಿಕ ಪೊಲೀಸರು, ಪ್ರಯೋಗಾಲಯದ ಇತರ ಮೂವರನ್ನು ಬಂಧಿಸಿದ್ದಾರೆ. ಇವರಲ್ಲೊಬ್ಬ ಅನಿಲ್ ಸಂಬಂಧಿ.
ಬಂಜೆತನ ಚಿಕಿತ್ಸೆ ಅಥವಾ ಕೃತಕ ಗರ್ಭದಾನಕ್ಕೆ ಸಂಗ್ರಹಿತ ವೀರ್ಯವನ್ನು ಬಳಸುವ ಕಾರಣ ವೀರ್ಯ ಕಳ್ಳತನದ ಸಂಘಟಿತ ಜಾಲವೇನಾದರೂ ಇದೆಯೇ ಎಂಬುದಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೂ ಅತೀ ಸುಲಭದಲ್ಲಿ ಲಭಿಸುವ ಈ ವಸ್ತುವನ್ನು ಕದ್ದೊಯ್ಯಬೇಕಾದ ಅಗತ್ಯವೇನು ಎಂಬುದು ತಜ್ಞರ ಪ್ರಶ್ನೆ.
|