ಬೆಲೆ ಏರಿಕೆ ವಿಚಾರದಲ್ಲಿ ಜನತೆಯ ಸಂಕಟವನ್ನು ರಾಜಕೀಯಗೊಳಿಸಬಾರದು ಎಂಬ ಶುಕ್ರವಾರದ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಸಿಪಿಐ(ಎಂ), ಇಂಥಹ ಹೇಳಿಕೆಗಳು ಸರಕಾರಕ್ಕೆ ಶುಭಕರವಲ್ಲ ಎಂದು ಹೇಳಿದೆ.
"ಈ ಹೇಳಿಕೆಯನ್ನು ನಾವು ಬಲವಾಗಿ ಆಕ್ಷೇಪಿಸುತ್ತೇವೆ. ರಾಜಕೀಯ ಪಕ್ಷಗಳಾಗಿ ಜನತೆಯ ಸ್ಥಿತಿಯ ಕುರುತು ಧ್ವನಿ ಎತ್ತುವ ಎಲ್ಲಾ ಹಕ್ಕು ನಮಗಿದೆ. ಪ್ರಧಾನ ಮಂತ್ರಿ ಕಚೇರಿ ಮತ್ತು ಸರಕಾರವು, ಜನತೆಯ ಸ್ಥಿತಿಯ ಕುರಿತ ಬೇಜವಾಬ್ದಾರಿಯ ಪ್ರಚೋದನೆಯಿಂದ ದೂರವಿರಬೇಕು" ಎಂದು ಸಿಪಿಐ(ಎಂ) ನಾಯಕ ಸೀತಾರಾಂ ಯಚೂರಿ ಹೇಳಿದ್ದಾರೆ. ಅವರು ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾತನಾಡುತ್ತಿದ್ದರು.
ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಎಡಪಕ್ಷದ ನಿಯೋಗವನ್ನು ಭೇಟಿ ಮಾಡಿದ ಬಳಿಕ, ಪ್ರಧಾನಿ ಮನಮೋಹನ್ ಸಿಂಗ್ ಅವರು ಜನತೆಯ ಸಂಕಟವನ್ನು ರಾಜಕೀಯಗೊಳಿಸುವ ಪ್ರಚೋದನೆಯಿಂದ ರಾಜಕೀಯ ಪಕ್ಷಗಳು ದೂರವಿರಬೇಕು ಎಂದು ಹೇಳಿದ್ದರು. ಅಲ್ಲದೆ, ಸಟ್ಟಾ ವ್ಯವಹಾರಗಾರರಿಗೆ ಮತ್ತು ಅಕ್ರಮ ದಾಸ್ತಾನುಗಾರರನ್ನು ಉತ್ತೇಜಿಸುವಂತಹ ಕೊರತೆಯ ವಾತಾವರಣ ಸೃಷ್ಠಿ ವಿರುದ್ಧ ಎಚ್ಚರಿಕೆ ನೀಡಿದ್ದರು.
ಯಚೂರಿಯವರ ಮಾತನ್ನು ಬೆಂಬಲಿಸಿದ ಜೆಡಿ(ಯು) ನಾಯಕ ಶದರ್ ಯಾದವ್, ಬೆಲೆ ಏರಿಕೆ ವಿರುದ್ಧ ತಮ್ಮ ಕಳವಳವನ್ನು ವ್ಯಕ್ತಪಡಿಸಲು ಪ್ರತಿ ರಾಜಕೀಯ ಪಕ್ಷಗಳಿಗೆ ಹಕ್ಕಿದೆ ಎಂದು ನುಡಿದರು.
|