ನವದೆಹಲಿ: ಕೇಂದ್ರ ಸಚಿವ ಟಿ.ಆರ್.ಬಾಲು ಅವರ ಕುಟುಂಬ ನಡೆಸುವ ಸಂಸ್ಥೆಗಳಿಗೆ ಅನಿಲ ಪೂರೈಕೆ ತ್ವರಿತಗೊಳಿಸಲು ಪ್ರಧಾನ ಮಂತ್ರಿ ಕಚೇರಿ ಶಿಫಾರಸು ಮಾಡಿದೆ ಎನ್ನಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರ ಸ್ಪಷ್ಟೀಕರಣ ಬಯಸಿ ವಿಪಕ್ಷಗಳು ಸೋಮವಾರ ಸಂಸತ್ತಿನಲ್ಲಿ ಧರಣಿ ನಡೆಸಿದರು.
ಈ ವಿಚಾರವನ್ನು ಪ್ರಸ್ತಾಪಿಸಲು ಬಿಡಿದ್ದಾಗ ಉಭಯ ಸದನಗಳಲ್ಲಿ ಎನ್‌ಡಿಎ ಸದಸ್ಯರು, ಸರಕಾರದ ಮೇಲೆ ಒತ್ತಡ ಹಾಕುವ ತಂತ್ರವಾಗಿ ಸಭಾತ್ಯಾಗ ಮಾಡಿದರು.
"ಬಾಲುವನ್ನು ಡಿಸ್‌ಮಿಸ್ ಮಾಡಿ, ಪ್ರಧಾನಿ ಕಚೇರಿಯಲ್ಲಿನ ಅವ್ಯವಹಾರಗಳನ್ನು ನಿಲ್ಲಿಸಿ" ಎಂಬ ಘೋಷಣೆಗಳನ್ನು ಕೂಗಿದ ಎನ್‌ಡಿಎ ಸದಸ್ಯರು ಸದನದ ಬಾವಿಗೆ ಧುಮುಕಿದರು. ಇದಕ್ಕೆ ಪ್ರತಿಯಾಗಿ ಅಟಲ್ ಬಿಹಾರಿ ವಾಜಪೇಯಿ ಆಡಳಿತ ವೇಳೆ ಪ್ರಧಾನಿ ಕಚೇರಿಯ ದರ್ಬಳಕೆ ಆಗಿತ್ತು ಎಂಬುದಾಗಿ ಟ್ರೆಜರಿ ಬದಿಯಿಂದ ಪ್ರತಿಕ್ರಿಯೆ ಕೇಳಿಬಂದಿತು.
ಪ್ರಶ್ನೋತ್ತರ ವೇಳೆಗೆ ಅವಕಾಶ ನೀಡಬೇಕೆನ್ನುತ್ತಾ, ಪ್ರಧಾನಿಯವರು ತಕ್ಷಣ ಪ್ರತಿಕ್ರಿಯೆ ನೀಡಬೇಕು ಎಂಬ ಎನ್‌ಡಿಎ ಬೇಡಿಕೆಯನ್ನು ಸ್ಪೀಕರ್ ಸೋಮನಾಥ ಚಟರ್ಜಿ ತಳ್ಳಿಹಾಕಿದರು.
ಲೈಟ್ ಕ್ಯಾಮರಾ ಕಟ್ ಮಾಡಿದ ಸ್ಪೀಕರ್ ಪ್ರಧಾನಿ ಮನಮೋಹನ್ ಸಿಂಗ್ ಅವರು ತಕ್ಷಣ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ, ಜೆಡಿಯು ಮತ್ತು ಎಂಡಿಎಂಕೆ ಸದಸ್ಯರು ಸದನ ಸಭೆ ಸೇರುತ್ತಲೇ ಎದ್ದು ನಿಂತಾಗ, ಅಪರೂಪದ ಕ್ರಮಕ್ಕೆ ಮುಂದಾದ ಸ್ಪೀಕರ್ ಸೋಮನಾಥ ಚಟರ್ಜಿ, ಲೈಟುಗಳನ್ನು ಮಬ್ಬುಗೊಳಿಸಿ, ನೇರ ಪ್ರಸಾರವನ್ನು ಅಲ್ಪಕಾಲ ಸ್ಥಗಿತಗೊಳಿಸಲು ಆದೇಶ ನೀಡಿದರು.
|