ಹಣದುಬ್ಬರವನ್ನು ಹತ್ತಿಕ್ಕಲು ಇಂಡಿಯಾ ಇಂಕ್ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿರುವ ಪ್ರಧಾನಿ ಮನಮೋಹನ್ ಸಿಂಗ್, ತೆರಿಗೆ ಮತ್ತು ಸುಂಕಗಳ ವಿನಾಯಿತಿಯ ಪ್ರಯೋಜನವು ಗ್ರಾಹಕರಿಗೆ ವರ್ಗಾವಣೆಯಾಗಿರುವುದನ್ನು ಖಾತರಿಪಡಿಸಬೇಕು ಎಂದು ಹೇಳಿದ್ದಾರೆ.
ಭಾರತೀಯ ಆರ್ಥಿಕತೆಯ ವಿಶಾಲವಾದ ಮ್ಯಾಕ್ರೊ ಎಕಾನಮಿಕ್‌ನ ಮೂಲತತ್ವಗಳು ಸುದೃಢವಾಗಿದೆ ಮತ್ತು ಮಧ್ಯಮ ಹಾಗೂ ದೀರ್ಘಕಾಲೀನ ದೃಷ್ಟಿಕೋನವು ಪ್ರಚೋದನಕಾರಿ ಎಂದು ಪ್ರಧಾನಿ ಸಿಂಗ್ ಅಭಿಪ್ರಾಯಿಸಿದ್ದಾರೆ. ಅವರ ಈ ಅಭಿಪ್ರಾಯವು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಾರ್ಷಿಕ ಸಾಲನೀತಿ ಪರಾಮರ್ಷೆಯನ್ನು ಪ್ರಕಟಿಸುವ ಕೆಲವೇ ಗಂಟೆಗಳಿಗೆ ಮುಂಚಿತವಾಗಿ ಹೊರಬಿದ್ದಿದೆ.
ಸರಕಾರ ಎದುರಿಸಬೇಕಿರುವ ತಕ್ಷಣದ ಸವಾಲು ಹಣದುಬ್ಬರ ಎಂದು ಒತ್ತಿ ಹೇಳಿದ ಅವರು, ಸರಕಾರವು ಕೈಗೊಂಡಿರುವ ಕ್ರಮಗಳು ಬೆಲೆ ಹೆಚ್ಚಳವನ್ನು ನಿಯಂತ್ರಿಸುವಲ್ಲಿ ಸಹಕರಿಸಲಿದೆ ಎಂದು ನುಡಿದರು.
"ನಾವು ಬೆಲೆ ಹೆಚ್ಚಳವನ್ನು ಸೌಮ್ಯಗೊಳಿಸಬಹುದು. ಆದರೆ ಬೆಲೆ ಹೆಚ್ಚಳವನ್ನು ಹದ್ದುಬಸ್ತಿನಲ್ಲಿಡಲು ಜಾಗತಿಕ ನಿಯಂತ್ರಿಣದ ಅವಶ್ಯಕತೆ ಇದೆ" ಎಂದು ತಿಳಿಸಿದರು.
|