ನವದೆಹಲಿ: ನಂದಿಗ್ರಾಮದ ಕುರಿತು ಸೋನಿಯಾ ಗಾಂಧಿ ಸೋಮವಾರ ನೀಡಿರುವ ಹೇಳಿಕೆಗೆ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಂದಿಗ್ರಾಮ ಜನತೆಯ ಮೇಲೆ ಸೋನಿಯಾ ಗಾಂಧಿ ತೋರಿರುವ ಕರುಣೆಗೆ ಪಶ್ಚಿಮ ಬಂಗಾಳದಲ್ಲಿ ಅತ್ಯಲ್ಪ ಬೆಲೆ ಎಂದು ನುಡಿದ ಬಸು, ಬೆಲೆ ಏರಿಕೆಯ ವಿರುದ್ಧ ಜನತೆಗೆ ಭರವಸೆ ನೀಡುವ ಬದಲಿಗೆ, ಅವರು ನಂದಿಗ್ರಾಮ ವಿಚಾರವನ್ನು ಆಯ್ದುಕೊಂಡಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಸಿಪಿಐ-ಎಂ ಪಾಲಿಟ್‌ಬ್ಯೂರೋ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಸೋನಿಯಾ ಗಾಂಧಿಗೆ ಪಶ್ಚಿಮ ಬಂಗಾಳದ ಕುರಿತು ಏನೂ ತಿಳಿದಿಲ್ಲ. ಹಾಗಾಗಿ ಅವರ ಮಾತಿಗೆ ಅಂತಾ ಬೆಲೆ ಇಲ್ಲ. ಮುಂದಿನ ತಿಂಗಳಲ್ಲಿ ಪಂಚಾಯತ್ ಚುನಾವಣೆ ನಡೆಯಲಿದ್ದು ಅದರ ಪ್ರಚಾರಕ್ಕಾಗಿ ಸೋನಿಯಾ ಬಂದಿದ್ದಾರೆ. ಅವರೇನೇ ಹೇಳಿದ್ದರೂ ಅದು ಚುನಾವಣಾ ಪೂರ್ವ ಪ್ರಚಾರವಷ್ಟೆ. ಅವರು ಬೆಲೆ ಏರಿಕೆ ಕುರಿತು ಒಂದು ಶಬ್ದವನ್ನೂ ಪ್ರಸ್ತಾಪಿಸಿಲ್ಲ. ಇದಲ್ಲದೆ, ಯುಪಿಎ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನೂ ಪಾಲಿಸುತ್ತಿಲ್ಲ" ಎಂದು ನುಡಿದರು.
ಸೋನಿಯಾಗಾಂಧಿ ಸೋಮವಾರ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭಾಷಣ ಮಾಡುತ್ತಾ, ನಂದಿಗ್ರಾಮ ವಿಚಾರವನ್ನು ಪಶ್ಚಿಮ ಬಂಗಾಳ ಸರಕಾರ ಅತಿ ಕೆಟ್ಟದಾಗಿ ನಿರ್ವಹಿಸಿದೆ ಎಂದು ಹೇಳಿದ್ದಾರೆ.
|