ಬೆಲೆಏರಿಕೆ ಬಿಕ್ಕಟ್ಟನ್ನು ವಿರೋಧಿಸಿ, ಶುಕ್ರವಾರ ಬಿಜೆಪಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಈ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಎನ್‌ಡಿಎ ಮಿತ್ರಪಕ್ಷಗಳು ಭಾಗೀದಾರರಲ್ಲ.
ಕಳೆದ ತಿಂಗಳು ಎನ್‌ಡಿಎ ಸಭೆಯ ಬಳಿಕವೇ ಮುಷ್ಕರಕ್ಕೆ ಕರೆ ನೀಡಲಾಗಿದ್ದರೂ, ಇದು ಪಕ್ಷದ ಕಾರ್ಯಕ್ರಮ ಎಂದು ಬಿಜೆಪಿ ಗುರುವಾರ ಹೇಳಿದೆ. ಈ ಕುರಿತು ತನ್ನ ಮಿತ್ರಪಕ್ಷಗಳು ಪ್ರತ್ಯೇಕ ಯೋಜನೆ ಹಮ್ಮಿಕೊಂಡಿವೆ ಎಂದು ಬಿಜೆಪಿ ಹೇಳಿದೆ.
ನಗದು ಮೀಸಲು ದರದಲ್ಲಿನ ಏರಿಕೆಯು ಪ್ರಮುಖ ಬಡ್ಡಿದರಗಳ ಮೇಲೆ ಪರಿಣಾಮ ಬೀರದು ಎಂಬುದಾಗಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ ಒಂದು ದಿನದ ಬಳಿಕ ಬಿಜೆಪಿ ಈ ಪ್ರತಿಭಟನೆ ನಡೆಸುತ್ತಿದೆ.
ಮುಂಜಾನೆಯಿಂದ ಮುಸ್ಸಂಜೆಯ ತನಕದ ಈ ಮುಷ್ಕರದಲ್ಲಿ, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲು ಹೇಳಲಾಗುವುದು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೆಕರ್ ತಿಳಿಸಿದ್ದಾರೆ. ಆದರೆ ವಾಹನಗಳ ಸಾಗಾಟಕ್ಕೆ ಅಡ್ಡಿಯುಂಟುಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹಣದುಬ್ಬರದ ವಿರುದ್ಧ ಹೋರಾಡಲು ಕಾರ್ಪೋರೆಟ್ ಸಂಸ್ಥೆಗಳ ಮೇಲೆ ಸಾಮಾಜಿಕ ಬದ್ಧತೆ ಇದೆ ಎಂಬ ಪ್ರಧಾನಿಯವರ ಹೇಳಿಕೆಯನ್ನು ತೀವ್ರವಾಗಿ ಪ್ರತಿರೋಧಿಸಿದ ಜಾವಡೆಕರ್, ಇದು ಒಬ್ಬನ ವಿಫಲತೆಯನ್ನು ಇನ್ನೊಬ್ಬನ ತಲೆಗೆ ಕಟ್ಟುವ ಪ್ರಯತ್ನವಲ್ಲದೆ ಮತ್ತೇನಲ್ಲ ಎಂದು ಟೀಕಿಸಿದ್ದಾರೆ.
|