ನವದೆಹಲಿ: ಸಂಸತ್ತಿನ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮಾಹಿತಿಗಳ ಅನಿಯಂತ್ರಿತ ಪಡೆಯುವಿಕೆಗೆ ವಿರೋಧ ವ್ಯಕ್ತ ಪಡಿಸಿರುವ ಸಂಸದೀಯ ಸಮಿತಿಯು, ಸಂಸದೀಯ ದಾಖಲೆಗಳನ್ನು ಹೊರಗೆಡಹುವುದನ್ನು ತಡೆಯಲು ವಿಶ್ವಾದ್ಯಂತ ಹಲವು ಶಾಸಕಾಂಗಳು ನಿಬಂಧನೆಗಳನ್ನು ಹೊಂದಿವೆ ಎಂದು ಹೇಳಿದೆ.
ಹಿರಿಯ ಕಾಂಗ್ರೆಸ್ ನಾಯಕ ವಿ. ಕಿಶೋರ್ ಚಂದ್ರ ದೇವ್ ನೇತೃತ್ವದ, ನಿಬಂಧನೆಗಳಿಗಾಗಿ ಲೋಕಸಭಾ ಸಮಿತಿಯು, 35 ರಾಷ್ಟ್ರಗಳ ಸಂಸದರಿಗೆ ಈ ಕುರಿತು ಪತ್ರಗಳನ್ನು ಬರೆದಿದ್ದು, ಅವರಲ್ಲಿ 22 ಮಂದಿ ಉತ್ತರಿಸಿದ್ದಾರೆ.
ನ್ಯಾಯಾಲಯ ಅಥವಾ ತನಿಖಾ ಏಜೆನ್ಸಿಯು ಸಂಸದೀಯ ದಾಖಲೆಗಳನ್ನು ವಿನಂತಿಸಿರುವ ಇತ್ತೀಚಿನ ನಿದರ್ಶನಗಳು ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಇಲ್ಲ ಮತ್ತು ಇಂತಹ ದಾಖಲೆಗಳನ್ನು ನ್ಯಾಯಾಲಯ ಅಥವಾ ಇತರ ತನಿಖಾ ಏಜೆನ್ಸಿ ಬಳಸುವುದನ್ನು ಸಂಸದೀಯ ನಿಬಂಧನೆಯು ತಡೆಯುತ್ತದೆ.
ಶ್ರೀಲಂಕಾ ಸಂಸತ್ತಿನಲ್ಲಿ ಯಾವುದಾದರೂ ದಾಖಲೆಗಾಗಿ ವಿನಂತಿ ಸಲ್ಲಿಸಿದ್ದರೆ, ಸಭಾಪತಿಯವರ ಲಿಖಿತ ಅನುಮತಿಯೊಂದಿಗೆ ಇದನ್ನು ಪಡೆಯಬಹುದಾಗಿದೆ. ಸಂಸತ್ತಿನ ಮುಂದಿಡಲಾಗುವ ಇಂತಹ ಯಾವುದೇ ದಾಖಲೆಗಳ ವಿಷಯದ ಕುರಿತಂತೆ ಯಾವುದೇ ಸದಸ್ಯರೂ ಎಲ್ಲಿಯೂ ಸಾಕ್ಷ್ಯ ನುಡಿಯುವಂತಿಲ್ಲ ಎಂದು ಶ್ರೀಲಂಕಾದ ಸಂವಿಧಾನ ಹೇಳುತ್ತದೆ.
ಕೆನಡಾದಲ್ಲಿ ಸಂಸದೀಯ ನಿಬಂಧನೆಗಳ ಕಾನೂನು ಸೆನೆಟ್‌ನಲ್ಲಿ ಕಾರ್ಯಾಚರಿಸುತ್ತದೆ. ಸಂಸತ್ತಿನಲ್ಲಿನ ಯಾವುದೇ ಪ್ರಕ್ರಿಯೆಗಳನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳಿದೆ.
ಸಂಸದೀಯ ಕಲಾಪಗಳ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗ ಪಡಿಸುವುದನ್ನು ಸಮಿತಿಯು ವಿರೋಧಿಸಿದ್ದು, ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ಸಲಹೆ ಮಾಡಿತ್ತು.
|