ಉತ್ತರ ಭಾರತೀಯರ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಮತ್ತೊಮ್ಮೆ ಕೂಗಾಡಿರುವುದು ರಾಜ್ಯ ಸರಕಾರಕ್ಕೆ ರಾಜಕೀಯ ತಲೆನೋವು ಪುನಃ ತಂದೊಡ್ಡಿದೆ.
ವಲಸಿಗರ ವಿರುದ್ಧ ರಾಜ್ ಠಾಕ್ರೆ ಹರಿಹಾಯ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಎನ್‌ಸಿಪಿ- ಕಾಂಗ್ರೆಸ್ ಮಿತ್ರ ಕೂಟ ಸರಕಾರವು, ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೇ ಅಥವಾ ಈ ಕೂಗಾಟದ ಬಗ್ಗೆ ಸುಮ್ಮನೆ ನಿರ್ಲಕ್ಷಿಸಬೇಕೇ ಎಂಬ ಇಕ್ಕಟ್ಟಿನಲ್ಲಿ ಸಿಲುಕಿದೆ. ಮೂರು ತಿಂಗಳ ಹಿಂದೆ ಎಲ್ಲಾ ಭಾಗಗಳಿಂದ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ ರಾಜ್ ವಿರುದ್ಧ ಸರಕಾರ ಕ್ರಮ ಕೈಗೊಂಡಿತ್ತು.
ಅವಶ್ಯಕತೆ ಬಿದ್ದರೆ, ಉತ್ತರ ಭಾರತೀಯರನ್ನು ಮುಂಬಯಿಯಿಂದ ಓಡಿಸಲೂ ಹಿಂಜರಿಯುವುದಿಲ್ಲ ಎಂದು ತಮ್ಮ ಪಕ್ಷದ ಎರಡನೇ ವರ್ಷಾಚರಣೆ ಸಂದರ್ಭ ರಾಜ್ ಠಾಕ್ರೆ ಮಾಡಿರುವ ವಾಗ್ದಾಳಿಯಿಂದ ಯಾವುದೇ ಹಿಂಸಾಚಾರ ಉಂಟಾದ ಬಗ್ಗೆ ವರದಿಯಾಗಿಲ್ಲದಿದ್ದರೂ, ವಿಲಾಸ್ ರಾವ್ ದೇಶ್‌ಮುಖ್ ಸರಕಾರ ತಕ್ಷಣವೇ ರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಹುತೇಕ ರಾಜಕೀಯ ಪಕ್ಷಗಳು ಒತ್ತಾಯಿಸತೊಡಗಿವೆ.
ಅಲ್ಲದೆ, ಉತ್ತರ ಭಾರತೀಯರಿಂದಲೇ ಮುಂಬಯಿಯಲ್ಲಿ ಅಪರಾಧಗಳು ಹೆಚ್ಚಾಗಿದ್ದು, ಅಗತ್ಯ ಬಂದರೆ ಈ ವಲಸಿಗರ ವಿರುದ್ಧ ಒಂದಾಗುವಂತೆ ಸ್ಥಳೀಯರಿಗೆ ರಾಜ್ ಠಾಕ್ರೆ ಕರೆ ನೀಡಿದ್ದರು.
ಆದರೆ ರಾಜ್ ಠಾಕ್ರೆ ಅವರು ಪ್ರಾದೇಶಿಕತೆಯ ಬಗ್ಗೆ ಈ ರೀತಿ ಹೇಳಿಕೆ ನೀಡಿದಲ್ಲಿ, ಅವರು ಶಿವಸೇನೆಯ ಮತಗಳನ್ನು ಒಡೆಯುವಲ್ಲಿ ಸಫಲರಾಗಬಲ್ಲರು ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್-ಎನ್‌ಸಿಪಿ ಸರಕಾರ, ರಾಜ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಹಿಂದೆಮುಂದೆ ನೋಡುತ್ತಿದೆ.
|