ಬಹು ನಿರೀಕ್ಷಿತ ಹಾಗೂ ಬಹು ವಿಳಂಬಿತ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ, ಸಮಾಜವಾದಿ ಪಕ್ಷದ ಸದಸ್ಯರ ನಾಟಕೀಯ ದೃಶ್ಯಗಳು ಹಾಗೂ ಪ್ರತಿಭಟನೆಗಳ ನಡುವೆಯೇ ಮಂಡಿಸಲಾಗಿದೆ.
ಮಸೂದೆಯನ್ನು ಮಂಡಿಸಲು ಕಾನೂನು ಸಚಿವ ಎಚ್.ಆರ್.ಭಾರಾದ್ವಾಜ್ ಅವರು ಎದ್ದು ನಿಲ್ಲುತ್ತಿರುವಂತೆಯೇ, ಸಮಾಜವಾದಿ ಪಕ್ಷದ ಅಬು ಅಸಿಮ್ ಅಜ್ಮಿ ಹಾಗೂ ಅವರ ಸಹೋದ್ಯೋಗಿಳು, ಉತ್ತರ ಭಾರತೀಯರ ವಿರುದ್ಧ ರಾಜ್ ಠಾಕ್ರೆ ಹೇಳಿಕೆಯನ್ನು ಪ್ರತಿಭಟಿಸಲು ಸದನದ ಬಾವಿಗೆ ಧುಮುಕಿದ್ದರು. ಅವರು ಮಹಿಳಾ ಮೀಸಲಾತಿ ಮಸೂದೆಯ ಪ್ರತಿಯನ್ನು ಕಸಿಯಲು ಪ್ರಯತ್ನಿಸಿದರು.
ಆದಾಗ್ಯೂ, ಭಾರದ್ವಾಜ್ ಅವರು ಧ್ವನಿಮತದ ಬೆಂಬಲದೊಂದಿಗೆ ಮಸೂದೆಯನ್ನು ಮಂಡಿಸುವಲ್ಲಿ ಯಶಸ್ವಿಯಾದರು.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸದೆ ಅವಧಿಗಿಂತ ಮೊದಲು ಲೋಕಸಭೆಯ ಅಧಿವೇಶನವನ್ನು ಮುಂದೂಡಿದ್ದರ ಬಗ್ಗೆ ಸಿಪಿಐ ಸೋಮವಾರ ಆಕ್ಷೇಪ ವ್ಯಕ್ತಪಡಿಸಿತ್ತು.
ಮಹಿಳಾ ಮೀಸಲಾತಿ ಕುರಿತಂತೆ ಸೋಮವಾರ ರಾತ್ರಿ ಕೇಂದ್ರ ಸಂಪುಟ ಸಭೆ ನಡೆಸಿದ್ದು, ಸಭೆಯಲ್ಲಿ ಮಸೂದೆ ಮಂಡನೆಯ ನಿರ್ಧಾರ ಕೈಗೊಂಳ್ಳಲಾಗಿತ್ತು. ಅಂತೆಯೇ ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿದೆ.
ರಾಜ್ಯ ಸಭೆಯಲ್ಲಿ ಮಂಡಿಸಿರುವ ಮಸೂದೆಯನ್ನು ಸದನದ ಸ್ಥಾಯಿ ಸಮಿತಿಯ ಪರಿಶೀಲನೆಗೆ ನೀಡುವ ನಿರೀಕ್ಷೆ ಇದೆ. ಮೀಸಲಾತಿಯ ಪ್ರಮಾಣದ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ಅಪಸ್ವರ ಎತ್ತಿದ್ದರಿಂದ ಹಾಗೂ ಇನ್ನೂ ಕೆಲವು ಪಕ್ಷಗಳು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಒದಗಿಸಬೇಕು ಎಂದು ಒತ್ತಾಯಿಸುತ್ತಿರುವುದರಿಂದ ಈ ಮಸೂದೆ ದಶಕಗಳಿಂದ ನನೆಗುದಿಗೆ ಬಿದ್ದಿದೆ.
|