ಮೂರು ತಿಂಗಳ ಕಾಲದ ಬಜೆಟ್ ಅಧಿವೇಶನ ಮಂಗಳವಾರ ಅಂತ್ಯಗೊಂಡಿದ್ದು, ಸಂಸತ್ತನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ರಾಜ್ಯಸಭೆಯಲ್ಲಿ ಗದ್ದಲದ ನಡುವೆಯೂ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಬಳಿಕ ನಿಗದಿಗಿಂತ ಮೂರು ದಿವಸಗಳ ಮುಂಚಿತವಾಗಿಯೇ ಅಧಿವೇಶನವನ್ನು ಮುಂದೂಡಲಾಯಿತು.
ಲೋಕಸಭೆಯನ್ನು ಸೋಮವಾರವೇ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲಾಗಿತ್ತು. ಜೆಡಿಯು ಮತ್ತು ಸಮಾಜವಾದಿ ಪಕ್ಷದ ಸದಸ್ಯರು ತೀವ್ರ ಕೋಲಾಹಲವೆಬ್ಬಿಸಿದ ಕಾರಣದಿಂದ ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿಯವರು ಸಾಂಪ್ರದಾಯಿಕ ಭಾಷಣವನ್ನೂ ಮಾಡಲಾಗದೆ, ಗದ್ದಲದ ಅಂತ್ಯ ಕಂಡಿತು.
ಎರಡೆರಡು ಮುಂದೂಡಿಕೆಯ ಬಳಿಕ ಭೋಜನ ವಿರಾಮದ ಬಳಿಕ ಸಭೆ ಸೇರುತ್ತಿರುವಂತೆಯೇ ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಸಮಾಜವಾದಿ ಪಕ್ಷ ಹಾಗೂ ಜೆಡಿಯು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮಸೂದೆ ಮಂಡನೆಗಾಗಿ ನಿಯಮದಂತೆ ಸರಕಾರವು 48 ಗಂಟೆ ಮುಂಚಿತವಾಗಿ ನೋಟೀಸು ನೀಡದೆ ಪ್ರಕ್ರಿಯಾ ನಿಯಮವನ್ನು ಮುರಿದಿದೆ ಎಂದು ಜೆಡಿ-ಯು ನಾಯಕ ಶರದ್ ಯಾದವ್ ದೂರಿದರು.
ಆದರೆ, ಇಂತಹ ಆಕ್ಷೇಪಗಳನ್ನು ಪೂರ್ವಾಹ್ನ ಮಸೂದೆ ಮಂಡನೆ ವೇಳೆಗೆ ಎತ್ತಬೇಕಿತ್ತು ಎಂಬ ನಿಲುವು ತಳೆದ ರಾಜ್ಯಸಭಾಧ್ಯಕ್ಷರು ಯಾದವ್ ಅವರ ಆಕ್ಷೇಪವನ್ನು ತಳ್ಳಿಹಾಕಿದರು.
ಸಮಾಜವಾದಿ ಪಕ್ಷದ ಸದಸ್ಯರು ಸದನದ ಬಾವಿಗೆ ಧುಮುಕುವ ಬೆದರಿಕೆ ಹಾಕುತ್ತಲೇ, ಅಧ್ಯಕ್ಷರು ತಮ್ಮ ಸಾಂಪ್ರದಾಯಿಕ ಭಾಷಣವನ್ನು ತುಂಡರಿಸಿ, ರಾಷ್ಟ್ರಗೀತೆಯೊಂದಿಗೆ ಸದನವನ್ನು ಮುಂದೂಡಿದರು.
|