ಲೋಕಸಭೆ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನ ಮೀಸಲಾತಿ ಕಲ್ಪಿಸುವ ಮಸೂದೆಗೆ ಆಡಳಿತಾರೂಢ ಯುಪಿಎ ಅಂಗಪಕ್ಷಗಳಾದ ಆರ್‌ಜೆಡಿ ಮತ್ತು ಎಸ್‌ಪಿಗಳು ತೀವ್ರ ವಿರೋಧ ವ್ಯಕ್ತಪಡಿಸಿರುವುದರೊಂದಿಗೆ ಸಂಸತ್ತು ಈ ಬಾರಿಯೂ ಅಂಗೀಕಾರ ನೀಡುವುದು ದೂರದ ಮಾತೇ ಸರಿ.
ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಿರುವುದನ್ನು ಕಾಂಗ್ರೆಸ್, ಎಡಪಕ್ಷಗಳು ಹಾಗೂ ಬಿಜೆಪಿಯು ಸ್ವಾಗತಿಸಿದರೂ, ಬಿಎಸ್‌ಪಿಗೆ ಮೀಸಲಾತಿಯೊಳಗೆ ಮತ್ತೊಂದು ಮೀಸಲಾತಿ ಬೇಕಿದೆ. ಶೇ.33 ಕೋಟಾದ ಹೊರಗೆ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳಿಗೆ ಮತ್ತೊಂದು ಕೋಟಾ ನೀಡಬೇಕೆಂಬುದು ಬಿಎಸ್ಪಿ ನಾಯಕಿ ಮಾಯಾವತಿ ಆಗ್ರಹ.
ಮಹಿಳೆಯರ ಕೋಟಾದೊಳಗೆ ಹಿಂದುಳಿದ ವರ್ಗದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕೋಟಾಕ್ಕಾಗಿ ತಮ್ಮ ಪಕ್ಷ ಶ್ರಮಿಸುತ್ತದೆ ಎಂದು ಹೇಳಿರುವ ಕೇಂದ್ರ ಸಚಿವ, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಸ್ಥಾಯಿ ಸಮಿತಿಯೂ ಸೇರಿದಂತೆ ವಿಭಿನ್ನ ವೇದಿಕೆಗಳಲ್ಲಿ ಈಗ ಮಂಡಿಸಲಾಗಿರುವ ಮಸೂದೆಯನ್ನು ಬಲವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲು ದೈಹಿಕವಾಗಿಯೇ ತಡೆಯೊಡ್ಡುವ ಮೂಲಕ, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕೋಟಾದೊಳಗೆ ಕೋಟಾಕ್ಕೆ ಆಗ್ರಹಿಸುತ್ತಿರುವ ಸಮಾಜವಾದಿ ಪಕ್ಷವು ಕೂಡ ಈಗಾಗಲೇ ತನ್ನ ನಿಲುವನ್ನು ಬಯಲುಗೊಳಿಸಿದೆ. ಒಬಿಸಿ, ದಲಿತರು ಮತ್ತು ಮುಸ್ಲಿಮರಿಗೆ ಕೋಟಾ ದೊರೆಯುವವರೆಗೂ ತನ್ನ ಪಕ್ಷವು ಈ ಮಸೂದೆಯನ್ನು ವಿರೋಧಿಸುತ್ತದೆ ಎಂದು ಎಸ್ಪಿ ಸದಸ್ಯ ಅಬು ಅಸೀಂ ಅಜ್ಮಿ ತಿಳಿಸಿದ್ದಾರೆ.
|