ಪ್ರಯಾಣಿಕರನ್ನು ತುಂಬಿದ್ದ ಬಸ್ಸೊಂದು ಚೀನಬ್ ನದಿಗೆ ಉರುಳಿಬಿದ್ದ ಪರಿಣಾಮ 20 ಪ್ರಯಾಣಿಕರು ಅಸುನೀಗಿದ ಘಟನೆ ಜಮ್ಮುಕಾಶ್ಮೀರದ ಕಿಸ್ತ್ವಾರ್‌ಗೆ ಸಮೀಪದಲ್ಲಿ ಗುರುವಾರ ಸಂಭವಿಸಿದೆ. ನದಿಯಿಂದ ಇದುವರೆಗೆ 20 ದೇಹಗಳನ್ನು ಹೊರತೆಗೆಯಲಾಗಿದ್ದು, ನೀರಿನಲ್ಲಿ ಮುಳುಗಿದ ಪ್ರಯಾಣಿಕರಿಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ರೈಫಲ್ಸ್ , ಪೊಲೀಸ್ ಮತ್ತು ಸ್ಥಳೀಯರು ನೀರಿನಲ್ಲಿ ಮುಳುಗಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಚೀನಬ್ ನದಿ ದಡದಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಿಗೂ ಕಟ್ಟೆಚ್ಚರದ ಸಂದೇಶ ಕಳುಹಿಸಲಾಗಿದ್ದು, ಮುಳುಗಿದ ಪ್ರಯಾಣಿಕರನ್ನು ಪತ್ತೆಹಚ್ಚಲು ವಿಶೇಷ ಈಜುಗಾರರನ್ನು ಕರೆಸಲಾಗಿದೆ ಎಂದು ಡಿಐಜಿ ಎಚ್.ಕೆ. ಲೋಹಿಯಾ ಹೇಳಿದ್ದಾರೆ.
ಬಾಲಕಿಯೊಬ್ಬಳು ಸೇರಿದಂತೆ ಇಬ್ಬರು ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಬಸ್ಸು ನದಿಗೆ ಉರುಳುವಾಗ ಅವರು ಬಸ್ಸಿನ ಹೊರಗೆ ಜಾರಿದ ಪರಿಣಾಮ ಅವರಿಬ್ಬರು ಜವರಾಯನ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ.
ಕಿಸ್ತ್ವಾರ್ ಕಡೆ ಹೊರಟಿದ್ದ ಬಸ್ ಬಲ್ಲಾರಾ ಪುಲ್ ಬಳಿ ತಿರುವೊಂದರಲ್ಲಿ ಚೀನಬ್ ನದಿಗೆ ಉರುಳಿಬಿತ್ತೆಂದು ವರದಿ ತಿಳಿಸಿದೆ. ಫಾಗು ಮಾರ್ಕ್ ಪ್ರದೇಶದ ಬಳಿ ಬಸ್ ಅಪಘಾತಕ್ಕೀಡಾದಾಗ, ಸುಮಾರು 25 ಪ್ರಯಾಣಿಕರು ಬಸ್ಸಿನಲ್ಲಿದ್ದರೆಂದು ಹೇಳಲಾಗಿದೆ.
|