ಪಶ್ಚಿಮಬಂಗಾಳದ ಐದು ಜಿಲ್ಲೆಗಳಲ್ಲಿ ಭಾನುವಾರ ಬೆಳಿಗ್ಗೆ ಪ್ರಥಮ ಹಂತದ ಪಂಚಾಯ್ತಿ ಚುನಾವಣೆ ಮತದಾನ ಬೆಳಿಗ್ಗೆ ಆರಂಭಗೊಂಡಿದ್ದು, ಪೂರ್ವ ಮಿಡ್ನಾಪುರದ ನಂದಿಗ್ರಾಮದ ಮೂರು ಗ್ರಾಮಗಳಲ್ಲಿ ಉದ್ನಿಗ್ನ ಸ್ಥಿತಿ ತಲೆದೋರಿದೆ, ಸಿಪಿಐಂ ಬೆಂಬಲಿಗರು ಮತ್ತು ತೃಣಮೂಲ ಕಾಂಗ್ರೆಸ್ಸಿಗರ ನಡುವೆ ಘರ್ಷಣೆ ಆರಂಭಗೊಂಡಿದ್ದು, ಉಳಿದ ನಾಲ್ಕು ಜಿಲ್ಲೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ತಾಕಪೋರಾ, ಕಮಲಾಪುರ್ ಮತ್ತು ಸೋನಾಚುರ್ ಗ್ರಾಮಗಳಲ್ಲಿ ಸಿಪಿಎಂ ಬೆಂಬಲಿಗರು ಮತದಾನದ ಬೂತ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಮತದಾರರಿಗೆ ಬೆದರಿಕೆ ಹಾಕುವ ಕಾರ್ಯದಲ್ಲಿ ನಿರತವಾಗಿರುವುದಾಗಿ ತೃಣಮೂಲ ಕಾಂಗ್ರೆಸ್ ಮುಖಂಡ ಸಮ್ಮದ್ ಆರೋಪಿಸಿದ್ದಾರೆ.
ನಮ್ಮ ಸಹಾಯಕ್ಕೆ ಆಗಮಿಸುವಂತೆ ನಾವು ಸಿಆರ್‌ಪಿಎಫ್‌ನ ಸಹಾಯ ಯಾಚಿಸುತ್ತಿರುವುದಾಗಿ ಅವರು ಹೇಳಿದರು. ನಾವು ಕೇವಲ ಸಿಆರ್‌ಪಿಎಫ್ ಮೇಲೆ ಮಾತ್ರ ನಂಬಿಕೆ ಇಟ್ಟಿದ್ದೇವೆ. ಆದರೆ ಇಲ್ಲಿ ಅವರಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ. ಚುನಾವಣೆಯಲ್ಲಿ ಇಲ್ಲಿ ನಕಲಿ ಮತದಾನ ನಡೆಯುವಂತಾಗಿದೆ ಎಂದು ಆರೋಪಿದ್ದಾರೆ.
ಆದರೆ ನಂದಿಗ್ರಾಮದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿರುವುದಾಗಿ ಸಿಪಿಎಂ ಮುಖಂಡರು ತಿಳಿಸಿದ್ದು, ಪಕ್ಷದ ಕಾರ್ಯಕರ್ತರು ಬೆಂಬಲಿಗರು ಮತ್ತೆ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಉದ್ವಿಗ್ನ ಸ್ಥಿತಿ ತಲೆದೋರಿರುವ ನಂದಿಗ್ರಾಮ ಸೇರಿದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್ ನಡುವೆ ಮತದಾನ ಆರಂಭಗೊಂಡಿದ್ದು, ಮಾವೋವಾದಿಗಳ ಪ್ರದೇಶವಾದ ಪುರುಲಿಯಾ, ಬಾಂಕುರಾ, ಪಶ್ಚಿಮ ಮಿಡ್ನಾಪುರ ಮತ್ತು ವರ್ಧಮಾನ್ ಜಿಲ್ಲೆಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಪ್ರಥಮ ಹಂತದ ಚುನಾವಣೆ ಆರಂಭಗೊಂಡಿದ್ದು, ಎರಡನೇ ಹಂತ ಮೇ 14 ಹಾಗೂ ಮೂರನೇ ಹಂತ 18ರಂದು ನಡೆಯಲಿದೆ.
|