ಮುಂಬೈ ಟಾಡಾ ಕೋರ್ಟ್ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ಘನಿ ಇಸ್ಮಾ ತುರ್ಕ್ ಎಂಬಾತನಿಗೆ ವಿಧಿಸಲಾಗಿರುವ ಮರಣದಂಡನೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ತನಗೆ ವಿಧಿಸಿದ್ದ ಮರಣದಂಡನೆ ವಿರುದ್ಧ ತುರ್ಕ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಅವಕಾಶ ನೀಡಿದ ನ್ಯಾಯಮೂರ್ತಿ ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ಸಿಬಿಐಗೆ ನೋಟಿಸ್ ಜಾರಿಮಾಡಿದೆ.
ಇನ್ನೊಬ್ಬ ಆರೋಪಿ ಶೇಕ್ ಅಲಿ ಶೇಖ್ ಉಮರ್ ಮೇಲ್ಮನವಿಗೆ ಸಂಬಂಧಿಸಿದಂತೆ ಕೂಡ ಸಿಬಿಐಗೆ ಸರ್ವೊಚ್ಛ ನ್ಯಾಯಾಲಯ ನೋಟಿಸ್ ನೀಡಿದೆ. ಶೇಖ್ ಅಲಿಗೆ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಒಳಗಾದ ಮೂವರಲ್ಲಿ ತುರ್ಕ್ ಮೊದಲನೆಯವನು. ಮೊಹಮದ್ ಮುಸ್ತಾಕ್ ಮೂಸಾ ತರಾನಿ ಮತ್ತು ಪರ್ವೇಜ್ ಅಹ್ಮದ್ ನಾಸಿರ್ ಶೇಖ್ ಅವರಿಗೆ ಕೂಡ ತುರ್ಕ್ ಜತೆ ಮರಣದಂಡನೆ ವಿಧಿಸಲಾಗಿದೆ.
ತುರ್ಕ್(52) ಬಾಂಬ್ ಸ್ಫೋಟದ ವೇಳೆ, ಕೇಂದ್ರ ಮುಂಬೈನ ಸೆಂಚುರಿ ಬಜಾರ್‌ನಲ್ಲಿ ಆರ್‌ಡಿಎಕ್ಸ್ ತುಂಬಿದ ಜೀಪ್ ಇರಿಸಿದ್ದ. ಈ ಸ್ಫೋಟದಿಂದಾಗಿ 88 ಮಂದಿ ಸಾವನ್ನಪ್ಪಿದ್ದು, ಇತರ 159 ಜನರು ಗಾಯಗೊಂಡಿದ್ದರು. ಸ್ಫೋಟದಿಂದಾಗಿ 2.41 ಕೋಟಿ ರೂ. ಆಸ್ತಿಪಾಸ್ತಿ ನಾಶಗೊಂಡಿತ್ತು. ತುರ್ಕ್‌ಗೆ 2.75 ಲಕ್ಷ ದಂಡ ಪಾವತಿಸುವಂತೆಯೂ ಟಾಡಾ ಕೋರ್ಟ್ ಆದೇಶಿಸಿತ್ತು.
|