ವಂಚನೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕೇರಳದ ಸ್ವಘೋಷಿತ ವಿವಾದಾಸ್ಪದ ಸ್ವಾಮಿ ಅಮೃತಚೈನ್ಯ ಅಲಿಯಾಸ್ ಸಂತೋಷ್ ಮಾಧವನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಯುಎಇಯಲ್ಲಿ ನಡೆಸಲಾಗಿರುವ ಹಣಕಾಸು ವಂಚನೆಗೆ ಸಂಬಂಧಿಸಿದಂತೆ ಸ್ವಾಮಿಯನ್ನು ಬಂಧಿಸಲಾಗಿದ್ದು, ಅವರನ್ನು ಕೇಂದ್ರೀಯ ವಲಯದ ಇನ್ಸ್‌ಪೆಕ್ಟರ್ ವಿನ್ಸನ್ ಎಂ ಪೌಲ್ ಮತ್ತು ಕೊಚ್ಚಿ ನಗರ ಪೊಲೀಸ್ ಆಯುಕ್ತ ಮನೋಜ್ ಅಬ್ರಹಾಂ ಅವರು ತನಿಖೆಗೊಳಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತೀಯ ದಂಡ ಸಂಹಿತೆಯ 420 ಕಲಮು ಪ್ರಕಾರ ವಂಚನೆ ಹಾಗೂ, ಹುಲಿ ಚರ್ಮ ಹೊಂದಿದ್ದಕ್ಕಾಗಿ ವನ್ಯಜೀವಿ ರಕ್ಷಣಾ ಕಾಯ್ದೆಯಡಿಯಲ್ಲೂ ಸ್ವಾಮಿ ವಿರುದ್ಧ ಭಾನುವಾರ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದುಬೈಯಲ್ಲಿರುವ ಕೇರಳ ಮೂಲದ ಮಹಿಳೆ ಸರಾಫಿನ್ ಎಡ್ವಿನ್ ಎಂಬ ಮಹಿಳೆ ನೀಡಿರುವ ದೂರಿನಾಧಾರದಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಡ್ವಿನ್ ಅವರಿಗೆ ಸ್ವಾಮಿ 40 ಲಕ್ಷ ರೂಪಾಯಿ ವಂಚಿಸಿರುವುದಾಗಿ ಅವರು ಇ-ಮೇಲ್ ಹಾಗೂ ಫ್ಯಾಕ್ಸ್ ಮೂಲಕ ದೂರು ಸಲ್ಲಿಸಿದ್ದಾರೆ.
ಈ ವಿವಾದಾಸ್ಪದ ಸ್ವಾಮಿಯು ಸೋಮವಾರ ಕೇರಳ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
|