ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ 'ಧಾರಾವಾಹಿ'ಯು, ಕಾಂಗ್ರೆಸ್ ಮೇಲೆ ದಾಳಿನಡೆಸಲು ವಿರೋಧ ಪಕ್ಷ ಬಿಜೆಪಿಗೆ ಸಾಕಷ್ಟು ಆಹಾರ ಒದಗಿಸಿದ್ದು, ಇದನ್ನು ಸೂಕ್ತವಾಗಿ ಬಳಸಿಕೊಂಡಿರುವ ಬಿಜೆಪಿಯು ಆಡಳಿತ ಪಕ್ಷದ ಹಿರಿಯ ನಾಯಕರು 'ಸಾಕುಪ್ರಾಣಿಗಳಂತೆ' ವರ್ತಿಸುತ್ತಾರೆ ಎಂದು ಹೇಳಿದೆ.
ಯಾವುದೇ ಕಾಂಗ್ರೆಸ್ ನಾಯಕರ ಹೆಸರೆತ್ತದೆ ಈ ಟೀಕೆ ಮಾಡಿರುವ ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ, ಕೆಲವು ನಾಯಕರ ವರ್ತನೆಗಳು ದೇಶದ ಪ್ರಜಾಪ್ರಭುತ್ವ ಮತ್ತು ಪ್ರಜಾತಾಂತ್ರಿಕ ರಾಜಕೀಯಕ್ಕೆ ಕಳಂಕ ಎಂದು ಹೇಳಿದ್ದಾರೆ.
"ಪ್ರಜಾಪ್ರಭುತ್ವವು ಮಾಗಿರುವ ಭಾರತದಂತಹ ಬೃಹತ್ ರಾಷ್ಟ್ರದತ್ತ ಜಗತ್ತು ತನ್ನ ದೃಷ್ಟಿ ಹರಿಸುತ್ತಿರುವಾಗ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಾಕುಪ್ರಾಣಿಗಳಂತೆ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ನಾವು ಭಾವಿಸುತ್ತೇವೆ" ಎಂದು ರೂಢಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರನ್ನು, ತಾವು ಯಾರನ್ನು ಉದ್ದೇಶಿಸಿ ಈ ಹೇಳಿಕೆ ನೀಡುತ್ತಿದ್ದೀರಿ ಎಂದು ಪದೇಪದೇ ಪ್ರಶ್ನಿಸಿದರೂ ನೇರ ಉತ್ತರ ಕೊಡದೆ ನುಣುಚಿಕೊಂಡರು. ಕಾಂಗ್ರೆಸ್ ನಾಯಕರು ಯಾಕೆ ಸಾಕುಪ್ರಾಣಿಗಳಂತೆ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ನಾನು ರಾಷ್ಟ್ರದ ಪ್ರಜಾತಂತ್ರ ಗುಣಮಟ್ಟದ ಕುರಿತು ಕಳವಳಗೊಂಡಿದ್ದೇನೆ" ಎಂದಷ್ಟೆ ನುಡಿದರು.
ಕಾಂಗ್ರೆಸ್‌ನಲ್ಲಿನ ನಿಷ್ಠೆಯ ಕುರಿತು ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿಯ ಈ ಹೇಳಿಕೆ ಹೊರಬಿದ್ದಿದೆ. ಮಾನವಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅವರು, ನೆಹರು-ಗಾಂಧಿ ಕುಟುಂಬಕ್ಕೆ ತಾನು ನಿಷ್ಠನೇ ಹೊರತು ತಾನೊಬ್ಬ ಹೊಗಳುಭಟ್ಟನಲ್ಲ ಎಂದು ಹೇಳಿದ್ದರು.
ಕಾಂಗ್ರೆಸ್‌ನಲ್ಲಿ ನೀತಿ ನಿರ್ಧಾರ ಪ್ರಕ್ರಿಯೆ ಕುರಿತು ಟೀಕಿಸಿದ್ದ ಅರ್ಜುನ್ ಸಿಂಗ್, ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ನಸಿಸುತ್ತಿದೆ ಎಂದು ಹೇಳಿದ್ದರಲ್ಲದೆ, ನಿಷ್ಠೆಯನ್ನು ಅಳೆಯುವ ಮಾನದಂಡ ಸೀಮಿತಗೊಳ್ಳುತ್ತಿದೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದರು.
|