ಪ್ರವಾಸಿ ತಾಣವಾಗಿರುವ ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಸಾಯಂಕಾಲ ಸುಮೂರು ಏಳೂವರೆ ಗಂಟೆ ವೇಳೆಗೆಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಐದು ಸ್ಥಳಗಳಲ್ಲಿ ಸ್ಫೋಟ ಸಂಭವಿಸಿದ್ದು, ಜೈಪುರ ತಲ್ಲಣಗೊಂಡಿದೆ.
ಸ್ಫೋಟದಲ್ಲಿ ಆರು ಮಂದಿ ಸತ್ತಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಶಕ್ತಿಶಾಲಿ ಬಾಂಬ್‌ಗಳನ್ನು ಸ್ಫೋಟಿಸಲಾಗಿದ್ದು, ಸಾವು ನೋವಿನ ಸಂಖ್ಯೆ ಅಧಿಕಗೊಳ್ಳುವ ಭೀತಿ ಪಡಲಾಗಿದೆ.
ಹನ್ನೆರಡು ನಿಮಿಷದೊಳಗಾಗಿ ಎಲ್ಲಾ ಐದು ಸ್ಫೋಟಗಳನ್ನು ನಡೆಸಲಾಗಿದೆ. ಒಂದು ಬಾಂಬನ್ನು ಅಂಗಡಿಯಲ್ಲಿ ಇರಿಸಲಾಗಿತ್ತು. ಮತ್ತೊಂದು ಬಾಂಬನ್ನು ಕಾರಿನಲ್ಲಿ ಇರಿಸಲಾಗಿತ್ತು ಎಂದು ಜೈಪುರ ಎಸ್ಪಿ ತಿಳಿಸಿದ್ದಾರೆ. ಬಾಂಬ್ ಸ್ಫೋಟದಿಂದ ಭಯಭೀತರಾದ ಜನತೆ ಸಿಕ್ಕಸಿಕ್ಕಲ್ಲಿ ಓಡಿದ ಪರಿಣಾಮ ಕಾಲ್ತುಳಿತ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.
ಸ್ಫೋಟ ನಡೆಸಿರುವ ಮೂರು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿರುವ ಜೈಪುರದ ಮುಖ್ಯ ಮಾಹಿತಿ ಆಯುಕ್ತ ರೋಹಿತ್ ಸಿಂಗ್, ಮಾಣಿಕ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಫೋಟವೊಂದು ನಡೆದಿರುವುದಾಗಿ ಹೇಳಿದ್ದಾರೆ. ಜೊಹಾರಿ ಬಜಾರ್‌ನಲ್ಲಿರುವ ಮಿಶ್ತಾನ್ ಬಂದರ್‌ನಲ್ಲಿ ಇನ್ನೊಂದು ಸ್ಫೋಟ ಸಂಭವಿಸಿದ್ದಲ್ಲಿ, ಮತ್ತೊಂದು ಸ್ಫೋಟವು ತ್ರಿಪೋಲಿಯಾ ಬಜಾರ್‌ನಲ್ಲಿ ಸಂಭವಿಸಿದೆ. ಇಲ್ಲಿ ಹನುಮಾನ್ ಮಂದಿರವಿದ್ದು. ಮಂಗಳವಾರ ದೊಡ್ಡ ಸಂಖ್ಯೆಯ ಭಕ್ತರು ನೆರೆದಿರುತ್ತಾರೆ.
ನಾಲ್ಕನೆಯ ಸ್ಫೋಟವನ್ನು ಸಂಗನೇರಿ ಗೇಟ್ ಬಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಸಂಪೂರ್ಣ ಉಪಬಡವಾಣೆಗಳನ್ನು ಹೊಂದಿರುವ ಇದು ಅತ್ಯಂತ ಇಕ್ಕಟ್ಟಾದ ಪ್ರದೇಶವಾಗಿದೆ. ಉದ್ಯೋಗ ನಿಮಿತ್ತ ತೆರಳಿದವರು ಸಾಯಂಕಾಲ ವೇಳೆ ಮನೆಗೆ ಮರಳುವ ಕಾರಣ ಈ ಜಾಗವೂ ಕಿಕ್ಕಿರಿದು ತುಂಬಿರುತ್ತದೆ.
ಪ್ರವಾಸಿ ಪ್ರದೇಶಗಳನ್ನೇ ಗುರಿಯಾಗಿಸಿ ದುಷ್ಕರ್ಮಿಗಳು ಸ್ಫೋಟ ನಡೆಸಿದ್ದಾರೆ. ಜೈಪುರದಲ್ಲಿ ಸ್ಫೋಟದ ಕುರಿತು ಈ ಹಿಂದೆ ಗುಪ್ತಚರ ವರದಿಗಳು ಹೇಳಿದ್ದವು.
ಜೈಪುರದಲ್ಲಿ ಮೇ 18ರಂದು ಐಪಿಎಲ್ ಪಂದ್ಯ ನಡೆಯಲಿದ್ದು, ಇಡೀ ಜೈಪುರ ಐಪಿಎಲ್ ಗುಂಗಿನಲ್ಲಿತ್ತು. ಪೊಲೀಸರು ಮತ್ತು ಭದ್ರತಾ ಪಡೆಗಳು ಐಪಿಎಲ್ ಭದ್ರತಾ ವ್ಯವಸ್ಥೆಯಲ್ಲಿ ನಿರತರಾಗಿದ್ದ ವೇಳೆಯೇ ಈ ದುರ್ಘಟನೆ ಸಂಭವಿಸಿದೆ.
ಜೈಪುರದಲ್ಲಿ ಸ್ಫೋಟ ನಡೆಸಿರುವ ಹಿನ್ನೆಲೆಯಲ್ಲಿ ದೆಹಲಿ ಮತ್ತು ಮುಂಬೈಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
|