ಗುಲಾಬಿ ಬಣ್ಣದ ಕಟ್ಟಡಗಳಿಂದ ಕಣ್ಮನ ಸೆಳೆಯುವ ಅತ್ಯಾಕರ್ಷಣೀಯ ರಂಗಿನ ನಗರ ಜೈಪುರ, ಮಂಗಳವಾರ ಸಾಯಂಕಾಲದ ಶಕ್ತಿಶಾಲಿ ಬಾಂಬ್ ಸ್ಫೋಟದ ನಿಮಿಷಗಳೊಳಗಾಗಿ ರಕ್ತದೋಕುಳಿ ಹರಿದು, ನೆತ್ತರ ನಗರವಾಗಿ ಪರಿವರ್ತನೆಯಾದ ಬೀಭತ್ಸ ದೃಶ್ಯಗಳು ಸೃಷ್ಟಿಯಾಗಿದ್ದವು.
ಸ್ಫೋಟ ಸ್ಥಳದಲ್ಲಿ ಕೆಲವು ದೇಹಗಳು ಹಲವು ಅಡಿಗಳಷ್ಟು ಎತ್ತರಕ್ಕೆ ಸಿಡಿದು ಬಿದ್ದಿದ್ದು, ಎಲ್ಲೆಂದರಲ್ಲಿ ಮಾಂಸದ ಮುದ್ದೆಗಳು ಚದುರಿ ಬಿದ್ದಿದ್ದು, ಕಾಲುವೆಯಂತೆ ರಕ್ತಹರಿಯುತ್ತಿತ್ತು. ರಸ್ತೆಯೆಲ್ಲೆಡೆ ಚದುರಿಬಿದ್ದಿದ್ದ ವಾಹನಗಳ ಬಿಡಿಭಾಗಗಳು ಕಂಡು ಬರುತ್ತಿದ್ದವು. ಪರಿಸರವಿಡೀ ಸುಟ್ಟವಾಸನೆಯಿಂದ ತುಂಬಿಹೋಗಿತ್ತು.
ಸೈಕಲ್ ರಿಕ್ಷಾ ಒಂದರಲ್ಲಿ ಕೈಯಲ್ಲಿ ಪ್ಯಾಕೇಟ್ ಒಂದನ್ನು ಹಿಡಿದು ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಅದೇ ಸ್ಥಿತಿಯಲ್ಲಿ ಅಸುನೀಗಿದ್ದರು. ಕೈಯಲ್ಲಿನ್ನೂ ಮಧುರಂಗಿಯ ಕೆಂಪು ಹೊಳೆಯುತ್ತಿದ್ದ ನವವಧು ಒಬ್ಬಾಕೆ ತನ್ನ ಸಿಹಿ ಕನಸುಗಳೊಂದಿಗೇ ಇಹಲೋಕ ತ್ಯಜಿಸಿದ್ದಳು. ರಸ್ತೆಯಲ್ಲೆಲ್ಲ ಚಪ್ಪಲಿಗಳು ದಿಕ್ಕಾಪಾಲಾಗಿ ಬಿದ್ದಿದ್ದವು. ಬದುಕುಳಿದವರು ತಮ್ಮ ಮೊಬೈಲ್ ಮೂಲಕ ತಮ್ಮ ಸಂಬಂಧಿಗಳಿಗೆ ಭಯಭೀತಿಯಿಂದ ಸಂದೇಶಗಳನ್ನು ನೀಡುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು.
ಸ್ಪೋಟದಿಂದ ಗಾಯಗೊಂಡವರನ್ನು ಸವಾಯ್ ಮಾನ್ ಸಿಂಗ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಗೆ ಒಯ್ಯಲಾಗಿದ್ದ ಮೃತ ದೇಹಳ ಕಿಸೆಗಳಲ್ಲಿದ್ದ ಮೊಬೈಲುಗಳು ರಿಂಗಣಿಸುತ್ತಿದ್ದು, ವೈದ್ಯರು ಈ ಕರೆಗಳನ್ನು ಸ್ವೀಕರಿಸಿ, ಕರೆನೀಡಿದವರಿಗೆ ಕೆಟ್ಟ ವಾರ್ತೆ ನೀಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳೂ ಕಂಡು ಬರುತ್ತಿತ್ತು.
ಸಾಯಂಕಾಲದ ವೇಳೆ ಜನಜಂಗುಳಿಯಿಂದ ನಿರತವಾಗಿದ್ದ ನಗರದಲ್ಲಿ ಬಾಂಬ್ ಸ್ಫೋಟಗೊಂಡಿದ್ದೇ ಬರಿಯ 12 ನಿಮಿಷದೊಳಗಾಗಿ ಇಡಿಯ ಚಿತ್ರಣವೇ ಬದಲಾಗಿ ಹೋಯಿತು.
ರಸ್ತೆ, ಗೋಡೆ, ಕಟ್ಟಡಗಳೆನ್ನದೆ ಎರಚಿದ ನೆತ್ತರು, ಮಾನವ ದೇಹದ ಅಂಗಾಂಗಗಳು, ಉಡುಪಿನ ಚೂರುಗಳು ಹಾರಿ ಬಿದ್ದಿದ್ದವು. ಬದುಕುಳಿದವರ ಹಾಹಾಕಾರ, ಅಂಬ್ಯುಲೆನ್ಸ್‌ಗಳ ಸೈರನ್ ಪ್ರದೇಶದಲ್ಲಿ ಮೊಳಗುತ್ತಿದ್ದು, ಭಯಭೀತಿಯ ಜನತೆ ಸಿಕ್ಕಸಿಕ್ಕಲ್ಲಿ ಓಡುತ್ತಿರ ಬೇಕಾದರೆ ಕಾಲ್ತುಳಿತವೂ ಸಂಭವಿಸಿತು. ಅತ್ಯಂತ ಮಾರಣಾಂತಿಕವಾದ ಈ ದೃಶ್ಯವು ಅಕ್ಷರಶಃ ರಣರಂಗದಂತೆ ಗೋಚರವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
|