ಸಂಸತ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಧಿಸಲಾಗಿದ್ದ 10 ವರ್ಷಗಳ ಜೈಲು ಶಿಕ್ಷೆ ಪ್ರಶ್ನಿಸಿ ಪ್ರಕರಣದ ಆರೋಪಿ ಶೌಕತ್ ಹುಸೇನ್ ಗುರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ನಮ್ಮ ತೀರ್ಪನ್ನು ಮರು ವಿಮರ್ಶಿಸಲು ಯಾವುದೇ ಕಾರಣಗಳು ಇಲ್ಲ ಎಂದು ನ್ಯಾಯಮೂರ್ತಿ ಪಿ.ಪಿ.ನಾವಲೇಕರ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 123 ಪ್ರಕಾರ ಶೌಕತ್ ಅವರಿಗೆ 2005ರ ಆಗಸ್ಟ್ 4ರಂದು ಸುಪ್ರೀಂ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ತನ್ನ ಮೇಲೆ ಆರೋಪವೇ ಇಲ್ಲದ ಅಪರಾಧಕ್ಕಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ಶೌಕತ್ ವಾದಿಸಿದ್ದ.
ವಿಚಾರಣಾ ನ್ಯಾಯಾಲಯವು 2001ರ ಡಿಸೆಂಬರ್ 13ರಂದು ಶೌಕತ್‌ಗೆ ಮರಣ ದಂಡನೆ ವಿಧಿಸಿತ್ತು. ಅದನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಆದರೆ, ಶಿಕ್ಷೆಯನ್ನು ಶೌಕತ್ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದ. ಶ್ರೇಷ್ಠ ನ್ಯಾಯಾಲಯವು ಶಿಕ್ಷೆಯನ್ನು 10 ವರ್ಷ ಕಾರಾಗೃಹ ಸಜೆಗೆ ಇಳಿಸಿತ್ತು.
|