ಸಂಸತ್ ಭವನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೌಕತ್ ಹುಸೇನ್ ಗುರುಗೆ ವಿಧಿಸಿರುವ ಶಿಕ್ಷೆಯ ಅವಧಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ.
ಈ ಹಿಂದೆ ಶೌಕತ್‍ಗೆ ವಿಚಾರಣಾ ನ್ಯಾಯಾಲಯವು, ಗಲ್ಲು ಶಿಕ್ಷೆ ವಿಧಿಸಿದ್ದು, ಅದನ್ನು ದೆಹಲಿ ಹೈಕೋರ್ಟ್ ಖಾಯಂ ಮಾಡಿತ್ತು.
ಆದರೆ, 2005ರ ತೀರ್ಪಿನಲ್ಲಿ ಪೋಟಾ ಕಾಯ್ದೆಯಡಿ ಶೌಕತ್‌ಗೆ ವಿಧಿಸಿದ್ದ ಎಲ್ಲ ಆರೋಪಗಳನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ಸಂಸತ್ ಮೇಲಿನ ದಾಳಿ ಸಂಚನ್ನು ಪೊಲೀಸರಿಂದ ಮುಚ್ಚಿಟ್ಟ ಕಾರಣಕ್ಕಾಗಿ ಹತ್ತು ವರ್ಷಗಳ ಶಿಕ್ಷೆ ವಿಧಿಸಿತ್ತು.
ಭಾರತೀಯ ದಂಡ ಸಂಹಿತೆಯ 123 ಸೆಕ್ಷನ್ ಪ್ರಕಾರ ಶೌಕತ್ ಈ ಫಿತೂರಿಯ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡದೆ ಇದ್ದ ಕಾರಣಕ್ಕಾಗಿ ದೋಷಿ ಎಂದು ನ್ಯಾಯಾಲಯ ತೀರ್ಮಾನಿಸಿತ್ತು. ಇದಲ್ಲದೆ, ಈ ಕೃತ್ಯವನ್ನು ರಾಷ್ಟ್ರದ ವಿರುದ್ಧ ಯುದ್ಧ ಸಾರುವುದಕ್ಕೆ ಸಮ ಎಂದು ಹೇಳಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಈ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಶೌಕತ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ನ್ಯಾಯಮೂರ್ತಿ ಪಿಪಿ ನಿಯೋಲ್ಕರ್ ನೇತೃತ್ವದ ನ್ಯಾಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.
|