ಜೈಪುರ: ಜೈಪುರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತ ರೂವಾರಿಯ ರೇಖಾಚಿತ್ರವನ್ನು ಪೊಲೀಸರು ಬುಧವಾರ ಬಿಡುಗಡೆ ಮಾಡಿದ್ದಾರೆ. ಏತನ್ಮಧ್ಯೆ ಈ ಭಯೋತ್ಪಾದನಾ ಕೃತ್ಯದಲ್ಲಿ ಮಹಿಳೆಯೊಬ್ಬಳು ಒಳಗೊಂಡಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. ಇದಲ್ಲದೆ ಇದರಲ್ಲಿ ಒಂಭತ್ತು ಸೈಕಲ್ ಬಾಂಬರ್‌ಗಳು ಒಳಗೊಂಡಿರಬಹುದೆಂದೂ ಹೇಳಲಾಗಿದೆ.
ಬಾಂಬ್‍ಸ್ಫೋಟದ ಪ್ರಮುಖ ರೂವಾರಿಯ ಸ್ಕೆಚ್ ಬಿಡುಗಡೆ ಮಾಡಿರುವ ಪೊಲೀಸರು, ಗೋಧಿ ಬಣ್ಣದ, ಸುಮಾರು 25ರ ಹರೆಯದ, ಬೆಂಗಾಲಿ ಆಕ್ಸೆಂಟ್‍ನಲ್ಲಿ ಮಾತನಾಡುವ ಈ ವ್ಯಕ್ತಿ ಪ್ರಧಾನ ಶಂಕಿತ ಎಂದು ಹೇಳಿದ್ದಾರೆ. ಆರಡಿ ಎತ್ತರ ಇರುವ ಈತ ಮಾನಕ್ ಚೌಕ್‌ನಲ್ಲಿ ಬಾಂಬ್ ಇರಿಸಿದ್ದಾನೆ ಎಂದು ನಂಬಲಾಗಿದೆ. ಈ ರೇಖಾಚಿತ್ರವನ್ನು ಸೈಕಲ್ ಅಂಗಡಿ ಮಾಲಿಕನ ಹೇಳಿಕೆಯಾಧಾರದಲ್ಲಿ ತಯಾರಿಸಲಾಗಿದೆ. ಈತನ ಅಂಗಡಿಯಿಂದ ಶಂಕಿತ ಬಾಂಬರ್‌ಗಳು ಸೈಕಲ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
ಒಂಭತ್ತು ಸೈಕಲ್‌ಗಳನ್ನು ನಗರದ ಎರಡು ಅಂಗಡಿಗಳಿಂದ ಖರೀದಿಸಲಾಗಿದೆ ಎಂದು ವರದಿ ತಿಳಿಸಿದೆ. ವಿವಿಧೆಡೆ ಬಾಂಬ್‌ಗಳನ್ನು ಇರಿಸುವಲ್ಲಿ ಹಲವಾರು ಮಂದಿಯ ಕೈವಾಡ ಇರಬಹುದು ಮತ್ತು ಒಂಭತ್ತು ತಂಡಗಳು ಇದ್ದಿರಬಹುದು ಎಂದು ಗೃಹ ಸಚಿವ ಗುಲಾಬ್ ಚಂದ್ ಕತಾರಿಯಾ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜೈಪುರದಲ್ಲಿ ಮಂಗಳವಾರ ಸಾಯಂಕಾಲ ಸಂಭವಿಸಿರುವ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ 80 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಆದರೆ, ಈ ಸಂಖ್ಯೆ 85ಕ್ಕೇರಿದೆ ಎಂದು ಅನಧಿಕೃತ ಮೂಲಗಳು ಹೇಳಿವೆ. ಇದಲ್ಲದೆ, 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
|