ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಸಿಬಿಐ ತನಿಖೆಯನ್ನು ಕೈಬಿಡಬೇಕೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಅರ್ಜಿಯ ಅನುಸಾರ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರಕ್ಕೆ ನೋಟೀಸ್ ನೀಡಿದೆ.
ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ಯಾವುದೇ ಮಧ್ಯಂತರ ಆದೇಶ ಪಾಸು ಮಾಡಲು ನಿರಾಕರಿಸಿದ್ದು, ಪ್ರಕರಣ ಮುಂದಿನ ವಿಚಾರಣೆಯನ್ನು ಜುಲೈ 24ಕ್ಕೆ ನಿಗದಿ ಪಡಿಸಿದೆ.
ಮಾಯಾವತಿ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರೆಯೆ ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೂ ಹೇಳಿದೆ.
ತಾಜ್ ಪರಂಪರಾ ಕಾರಿಡಾರ್ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ 2003ರ ಅಕ್ಟೋಬರ್ ಐದರಂದು ಆದೇಶ ನೀಡಿದ ಬಳಿಕ ಸಿಬಿಐ ಮಾಯಾವತಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿಕೊಂಡಿತ್ತು.
ತನ್ನ ವಿರುದ್ಧ ದಾಖಲಿಸಿರುವ ಪ್ರಥಮ ಮಾಹಿತಿ ವರದಿ ಕಾನೂನು ಬಾಹಿರ ಹಾಗೂ, ರಾಜ್ಯದ ಅನುಮತಿಯನ್ನು ತೆಗೆದುಕೊಂಡಿಲ್ಲ ಮಾತ್ರವಲ್ಲದೆ, ಸಿಬಿಐ ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪಾಗಿ ತಿಳಿದುಕೊಂಡಿದೆ ಎಂದು ಹೇಳಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ಸಿಬಿಐ ತಾಜ್ ಕಾರಿಡಾರ್ ಪ್ರಕರಣದ ತನಿಖೆ ಮಾಡಲು ಮಾತ್ರ ಆದೇಶ ನೀಡಿದೆ ಎಂದು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
|