ಬಸ್ ಪ್ರಯಾಣಕ್ಕೆ ಸಾಕಷ್ಟು ದುಡ್ಡಿಲ್ಲದ ಕಾರಣಕ್ಕೆ ಕಂಡಕ್ಟರ್ ಒಬ್ಬನಿಂದ ಕೆಳಗೆ ತಳ್ಳಲ್ಪಟ್ಟ ಒಬ್ಬ ಕಾರ್ಮಿಕ ಮತ್ತು ಆತನ 4 ವರ್ಷದ ಮಗಳು ಬಸ್ಸಿನಿಂದ ಬಿದ್ದು ಸಾವನ್ನಪ್ಪಿದ ದಾರುಣ ಘಟನೆಯೊಂದು ಒರಿಸ್ಸಾದಿಂದ ವರದಿಯಾಗಿದೆ.
ಘಟನೆ ನಡೆದದ್ದು ರಾಜ್ಯ ರಾಜಧಾನಿ ಭುವನೇಶ್ವರದಿಂದ 380 ಕಿ.ಮೀ. ದೂರದಲ್ಲಿರುವ ಜರ್ಸುಗುಡ ಎಂಬಲ್ಲಿ. ಬಸ್ ಕಂಡಕ್ಟರ್‌ನನ್ನು ಉದ್ದೇಶಪೂರ್ವಕವಲ್ಲದ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುರೇಶ್ ಮಿಶ್ರಾ ಗುರುವಾರ ತಿಳಿಸಿದ್ದಾರೆ. ಆರೋಪ ಸಾಬೀತಾದಲ್ಲಿ ಕಂಡಕ್ಟರ್‌ಗೆ ಗರಿಷ್ಠ 14 ವರ್ಷ ಕಾರಾಗೃಹ ಶಿಕ್ಷೆ ಆಗುವ ಸಾಧ್ಯತೆಗಳಿವೆ.
ತನ್ನ ಮಗಳೊಂದಿಗೆ ಪ್ರಯಾಣಿಸಲೆಂದು ಬಸ್ಸೇರಿದ್ದ ದುರ್ದೈವಿ ಸಂಸ್ಥಾರ್ ಟೋಪೋ (40) ಎಂಬಾತನ ಬಳಿ ನಿಗದಿತ ದರಕ್ಕಿಂತ 10 ರೂ. ಕಡಿಮೆ ಇತ್ತು. ಈ ಬಗ್ಗೆ ಕಂಡಕ್ಟರ್ ಮತ್ತು ಆತನ ಮಧ್ಯೆ ವಾಗ್ವಾದ ನಡೆಯಿತು. ಕೊನೆಗೆ ಸಿಟ್ಟಿನ ಭರದಲ್ಲಿ ಕಂಡಕ್ಟರ್, ತಂದೆ ಮಗಳನ್ನು ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ತಳ್ಳಿಬಿಟ್ಟ ಎಂದು ಮಿಶ್ರಾ ಹೇಳಿದ್ದಾರೆ.
ಬುಧವಾರ ಈ ಘಟನೆ ನಡೆದಿತ್ತು. ತಂದೆ-ಮಗಳು ಬಸ್ಸಿನಿಂದ ಬಿದ್ದು ಸಾವನ್ನಪ್ಪಿದ್ದರಿಂದ ಆಕ್ರೋಶಗೊಂಡ ಇತರ ಪ್ರಯಾಣಿಕರು ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಿಶ್ರಾ ವಿವರಿಸಿದ್ದಾರೆ.
|