ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ಎಲ್ಲಾ ನ್ಯಾಯಾಧೀಶರು ತಮ್ಮ ಆಸ್ತಿ ವಿವರ ಬಹಿರಂಗ ಪಡಿಸಬೇಕು ಮತ್ತು ನ್ಯಾಯಧೀಶರು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಡಿ ಬರುತ್ತಾರೆಂಬ ಘೋಷಣೆ ಮಾಡಬೇಕು ಎಂಬುದಾಗಿ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಮಾಡಿದೆ.
ಅರಿಜಿತ್ ಪಸಾಯತ್ ಮತ್ತು ಪಿ. ಸದಾಶಿವಂ ಅವರನ್ನೊಳಗೊಂಡ ನ್ಯಾಯಪೀಠವು, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಲ್) ಸಂಘಟನೆ ಸಲ್ಲಿಸಿರುವ ಅರ್ಜಿಯನ್ನು ವಜಾಮಾಡಿದೆ. ನ್ಯಾಯಾಧೀಶರೂ ಸಾರ್ವಜನಿಕ ಸೇವೆಯಲ್ಲಿರುವ ಕಾರಣ ಅವರೂ ಸಹ ತಮ್ಮ ಆಸ್ತಿಯನ್ನು ಘೋಷಿಸಬೇಕು ಹಾಗೂ ಮಾಹಿತಿ ಹಕ್ಕು ಕಾಯ್ದೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂಬುದಾಗಿ ಅರ್ಜಿದಾರರು ವಾದಿಸಿದ್ದರು.
ನ್ಯಾಯಾಧೀಶರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಬೇಕು ಎಂಬ ವಾದವನ್ನು ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ವಿರೋಧಿಸುತ್ತಲೇ ಬಂದಿದ್ದಾರೆ. ನ್ಯಾಯಾಧೀಶರು ಸಾರ್ವಜನಿಕ ಸೇವೆಯಲ್ಲಿರುವುದು ಹೌದಾದರೂ, ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯಾಯಾಧೀಶರೂ ತಮ್ಮ ಆಸ್ತಿಗಳನ್ನು ಬಹಿರಂಗಪಡಿಸಬೇಕು ಮತ್ತು ಇದು ನ್ಯಾಯಾಂಗದಲ್ಲಿನ ಭ್ರಷ್ಟಾಚಾರವನ್ನು ತಡೆಯುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂಬುದಾಗಿ ರಾಜಕೀಯ ಪಕ್ಷಗಳು ಮತ್ತು ವಕೀಲರ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿವೆ.
|