ಜೈಪುರದಲ್ಲಿ ಕರಾಳ ಬಾಂಬ್ ಸ್ಫೋಟ ಸರಣಿ ನಡೆದು ಎರಡು ದಿನಗಳಾದರೂ ತನಿಖೆಯ ನಿಟ್ಟಿನಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಕಂಡುಬಂದಿಲ್ಲವಾದರೂ, ಇದರಲ್ಲಿ ಬಾಂಗ್ಲಾ ದೇಶದ ಹುಜಿ ಉಗ್ರರ ಕೈವಾಡ ಇದೆ ಎಂಬ ಬಗ್ಗೆ ಎಳೆ ಸಿಕ್ಕಿದ್ದು, ಜೈಪುರ ಪೊಲೀಸರು ಸುಮಾರು 35 ಬಾಂಗ್ಲಾ ದೇಶೀಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ರಾಜಸ್ಥಾನ ಪೊಲೀಸರು ಮೂವರು ಆರೋಪಿಗಳ ಸ್ಕೆಚ್ ತಯಾರಿಸಿದ್ದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಸೈಕಲ್ ಶಾಪ್ ಮಾಲೀಕರು ಮತ್ತು ಇತರ ಪ್ರತ್ಯಕ್ಷ ಸಾಕ್ಷಿಗಳು ನೀಡಿದ ಮಾಹಿತಿಯನ್ನು ಆಧರಿಸಿ ಈ ಸ್ಕೆಚ್ ತಯಾರಿಸಲಾಗಿದೆ. ಸರಣಿ ಬಾಂಬ್ ಸ್ಫೋಟದ ಹಿಂದಿರುವ ಪ್ರಧಾನ ಶಂಕಿತನ ಸ್ಕೆಚ್ ಚಿತ್ರವನ್ನು ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದರು.
ಬಾಂಬ್ ದಾಳಿ, ಸ್ಫೋಟಕ ಸಂಗ್ರಹ, ಅವುಗಳನ್ನು ಆಯಕಟ್ಟಿನ ಜಾಗದಲ್ಲಿ ಇರಿಸುವುದೇ ಮುಂತಾದ ಕೃತ್ಯಗಳಿಗೆ ಸುಮಾರು 15-20 ಮಂದಿಯ ತಂಡ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಈ ನಡುವೆ, ಜೈಪುರ ಬಾಂಬ್ ಸ್ಫೋಟ ಸರಣಿಯನ್ನು ಖಂಡಿಸಿರುವ ಬಾಂಗ್ಲಾ ದೇಶವು, ಹುಜಿ ಉಗ್ರಗಾಮಿಗಳ ತಂಡವೇ ಇದರಲ್ಲಿ ಭಾಗಿಯಾಗಿದೆ ಎಂದು ತಕ್ಷಣದ ನಿರ್ಧಾರಕ್ಕೆ ಬಾರದಂತೆ ಭಾರತವನ್ನು ಕೋರಿದೆ.
ಇದೇ ವೇಳೆ, ರಾಜ್ಯದಲ್ಲಿ ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷ ತಂಡವನ್ನು ರಚಿಸಿರುವುದಾಗಿ ಮುಖ್ಯಮಂತ್ರಿ ವಸುಂಧರಾ ರಾಜೇ ಘೋಷಿಸಿದ್ದಾರೆ. ಐಜಿಪಿ ಮಟ್ಟದ ಅಧಿಕಾರಿಗಳುಳ್ಳ ವಿಶೇಷ ತನಿಖಾ ದಳವನ್ನು ನಾವು ರಚಿಸಿದ್ದು, ಅವರು ಸರಣಿ ಬಾಂಬ್ ಸ್ಫೋಟಗಳ ಕುರಿತು ತನಿಖೆ ನಡೆಸಲಿದ್ದಾರೆ ಎಂದು ರಾಜೇ ಹೇಳಿದರು.
ಇತ್ತ ನವದೆಹಲಿಯ ಹಳೆ ಗೋವಿಂದಪುರ ಪ್ರದೇಶದಲ್ಲಿ, ಮೂವರು ಆಫ್ಘನ್ನರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅವರಲ್ಲೊಬ್ಬ, ಜೈಪುರ ಪೊಲೀಸರು ತಯಾರಿಸಿದ್ದ ಸ್ಕೆಚ್ ಚಿತ್ರವನ್ನು ಹೋಲುತ್ತಿದ್ದ ಎಂದು ಪೂರ್ವ ದೆಹಲಿಯ ಡಿಸಿಪಿ ಅಜಯ್ ಚೌಧುರಿ ತಿಳಿಸಿದ್ದಾರೆ. ವಿಚಾರಣೆ ನಡೆಸಲಾಗಿದ್ದು, ಮಹತ್ವದ್ದೇನೂ ಹೊರಬಿದ್ದಿಲ್ಲ ಎಂದವರು ಹೇಳಿದ್ದಾರೆ.
|