ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಕಮ್ಯುನಿಸ್ಟ್ ನಾಯಕ ಹರ್ಕಿಶನ್ ಸಿಂಗ್ ಸುರ್ಜಿತ್(92) ಅವರ ದೇಹಸ್ಥಿತಿ ಚಿಂತಾಜನಕವಾಗಿದ್ದು, ವೆಂಟಿಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅವರನ್ನು ಗುರುವಾರ ನೋಯ್ಡಾದ ಮೆಟ್ರೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಸುರ್ಜಿತ್ ಅವರು ಉಸಿರಾಟದ ತೊಂದರೆಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರನ್ನು ತುರ್ತುನಿಘಾ ಘಟಕದಲ್ಲಿ ಇರಿಸಲಾಗಿದ್ದರೂ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸುರ್ಜಿತ್ ಅವರು ಕಳೆದೊಂದು ವರ್ಷಗಳಿಂದಲೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದ್ದಾರೆ. ವೆಂಟಿಲೇಟರ್ನಲ್ಲಿ ಇರುವ ಎಲ್ಲ ರೋಗಿಗಳ ಸ್ಥಿತಿ ಗಂಭೀರವಾಗಿಯೇ ಇರುತ್ತದೆ. ಆದೇನೆ ಇದ್ದರೂ ಸುರ್ಜಿತ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಪ್ರಧಾನ ನಿರ್ದೇಶಕ ಡಾ|ಪುರುಷೋತ್ತಮ ಹೇಳಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹಾಗೂ ಪೋಲಿಟ್ ಬ್ಯೂರೋ ಸದಸ್ಯ ಎಸ್.ಆರ್.ಪಿಳ್ಳೈ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಪಕ್ಷದ 19ನೆ ಕಾಂಗ್ರೆಸ್ನಲ್ಲಿ ಪ್ರಥಮ ಬಾರಿಗೆ ಅವರನ್ನು ಪಾಲಿಟ್ ಬ್ಯೂರೋದಿಂದ ಹೊರಗಿಡಲಾಗಿದೆ. ಬದಲಿಗೆ ಅವರಿಗೆ ಕೇಂದ್ರೀಯ ಸಮಿತಿಯ ವಿಶೇಷ ಆಹ್ವಾನಿತರೆಂಬ ಪದನಾಮ ನೀಡಲಾಗಿದೆ.
|