ಜೈಪುರ ಸ್ಫೋಟಕ್ಕೆ ಸಂಬಂಧಿಸಿ ಸ್ಕೆಚ್ ಬಿಡುಗಡೆ ಮಾಡಲಾಗಿದ್ದ ಶಂಕಿತ ಉಗ್ರಗಾಮಿಗಳಲ್ಲೊಬ್ಬನನ್ನು ನೋಡಿರುವುದಾಗಿ ಹೇಳಿಕೆ ನೀಡಿದ ಉದಯಪುರದ ಹೋಟೆಲ್ ಮಾಲೀಕರೊಬ್ಬರನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸುತ್ತಿದ್ದಾರೆ.
ಮಂಗಳವಾರದ ಸರಣಿ ಬಾಂಬ್ ಸ್ಫೋಟಕ್ಕೆ ಎರಡು ದಿನಗಳ ಮುನ್ನ ಒಬ್ಬ ಮಹಿಳೆ ಜೊತೆಗೆ ಶಂಕಿತ ಆರೋಪಿಯನ್ನು ನೋಡಿರುವುದಾಗಿ ಈ ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಈ ನಡುವೆ, ಸ್ಫೋಟಕ್ಕೆ ಸಂಬಂಧಿಸಿ ಅಜ್ಮೇರ್‌ನಲ್ಲಿ ಎಂಟು ಮಂದಿ ಬಾಂಗ್ಲಾ ದೇಶೀಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸ್ಕೆಚ್‌ನಲ್ಲಿರುವವನನ್ನೇ ಹೋಲುವ ವ್ಯಕ್ತಿಯೊಬ್ಬ ಕಳೆದ ಭಾನುವಾರ ಸಂಜೆ ತನ್ನ ರೆಸ್ಟಾರೆಂಟಿಗೆ ಬಂದಿದ್ದ ಎಂದು ಉದಯಪುರದ ಸಮೋರ್ ಬಾಗ್ ರೆಸ್ಟಾರೆಂಟ್ ಮಾಲೀಕ ಕಮಲ್ ಜೋಶಿ ಪೊಲೀಸರಿಗೆ ಹೇಳಿದ್ದರು. ಆತನ ಜೊತೆ ಒಬ್ಬ ಯುವ ಮಹಿಳೆಯೂ ಇದ್ದಳು. ಸಂಜೆ 4 ಗಂಟೆ ಸುಮಾರಿಗೆ ಅವರು ರೆಸ್ಟಾರೆಂಟಿನಲ್ಲಿದ್ದರು ಎಂದು ಅವರು ಹೇಳಿದ್ದಾರೆ. ಈ ತರುಣಿ ಬರುವಾಗ ಸೀರೆಯುಟ್ಟುಕೊಂಡಿದ್ದು, ಹೋಟೆಲಿನಿಂದ ಹೊರಬಿದ್ದಾಗ ಚೂಡಿದಾರ ಧರಿಸಿದ್ದಳು ಎಂದೂ ಜೋಶಿ ಹೇಳಿದ್ದರು.
ಇದೀಗ ನಗರದಲ್ಲಿ ಇವರಿಬ್ಬರ ಚಲನವಲನ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸೂರಜ್‌ಪೋಲ್ ಪೋಲೀಸ್ ಸ್ಟೇಶನ್ ಅಧಿಕಾರಿ ಹಿಮ್ಮತ್ ಸಿಂಗ್ ತಿಳಿಸಿದ್ದಾರೆ.
|