ಮುಂದಿನ ಶೈಕ್ಷಣಿಕ ವರ್ಷಕ್ಕೆ ಐಐಎಂ-ಕೋಲ್ಕತಾದಲ್ಲಿ ಶೇ.27 ಒಬಿಸಿ ಕೋಟಾ ಪದ್ಧತಿ ಜಾರಿಗೊಳಿಸುವುದಕ್ಕೆ ಕೋಲ್ಕತ್ತಾ ಹೈಕೋರ್ಟ್ ನೀಡಿರುವ ತೀರ್ಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಕೇಂದ್ರ ಸರಕಾರವು ನಿಟ್ಟುಸಿರು ಬಿಟ್ಟಿದೆ.
ಬುಧವಾರ ಕೋಲ್ಕತ್ತಾ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂಬ ವರದಿಗಳು ದೆಹಲಿ ತಲುಪಿದ ತಕ್ಷಣ ಕೇಂದ್ರ ಸರಕಾರವು ಕ್ರಮ ಕೈಗೊಂಡಿದ್ದು, ವಕೀಲ ಸುಬ್ಬರಾವ್ ಮೂಲಕ ಕರಡು ಅರ್ಜಿ ಸಲ್ಲಿಸಿ, ಕೋಲ್ಕತಾ ಹೈಕೋರ್ಟಿನಲ್ಲಿ ಬಾಕಿ ಇರುವ ಕೇಸನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸಬೇಕು ಎಂದು ಕೋರಲಾಗಿತ್ತು.
ಕೇಂದ್ರವು ಗುರುವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ, ಒಬಿಸಿ ಕೋಟಾಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ಬಳಿಕ ಅದನ್ನು ಅನುಷ್ಠಾನಗೊಳಿಸದಂತೆ ಆಗ್ರಹಿಸಿ ದೇಶಾದ್ಯಂತ ಹೈಕೋರ್ಟುಗಳಲ್ಲಿ ಮನವಿಗಳ ಮಹಾಪೂರವೇ ಹರಿದುಬರಲಿದೆ ಎಂಬುದರ ಬಗ್ಗೆ ತಮಗೆ ಮಾಹಿತಿ ದೊರೆತಿದೆ ಎಂದು ತಿಳಿಸಿತ್ತು.
ಇದೇ ರೀತಿ, ದೆಹಲಿ ಹೈಕೋರ್ಟ್ ಮತ್ತು ಮುಂಬಯಿ ಹೈಕೋರ್ಟುಗಳಲ್ಲಿ ಬಾಕಿ ಇರುವ ಇದೇ ಮಾದರಿಯ ಮನವಿಗಳನ್ನು ಸುಪ್ರೀಂ ಕೋರ್ಟಿಗೆ ವರ್ಗಾಯಿಸುವಂತೆ ಕೇಂದ್ರವು ಕೋರಿದೆ.
|