ಗಡಿಯಾಚೆಗಿನ ಗುಂಡಿನ ದಾಳಿ ಹೆಚ್ಚಳವಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಕೊನೆಗೂ ಗಟ್ಟಿ ನಿರ್ಧಾರ ಕೈಗೊಳ್ಳಲು ಮನ ಮಾಡಿರುವ ಸೇನೆ ತನ್ನ ಕಾರ್ಯತಂತ್ರ ಬದಲಿಸಿದ್ದು, ಕುಪ್ವಾರದ 28 ವಿಭಾಗೀಯ ಪ್ರದೇಶದ ಗಡಿ ನಿಯಂತ್ರಣ ರೇಖೆಯಗುಂಟ 5000 ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆ.
ತಂಗಧರ್, ಕೇರನ್, ಮಚ್ಚಾಲ್ ಮತ್ತು ಗುರೆಜ್ ಮುಂತಾದೆಡೆ ಗಡಿ ನಿಯಂತ್ರಣ ರೇಖೆಯಲ್ಲಿನ 28 ವಿಭಾಗಕ್ಕೆ ಈ ಪಡೆಗಳನ್ನು ನಿಯೋಜಿಸುವುದರೊಂದಿಗೆ, ರಾಷ್ಟ್ರೀಯ ರೈಫಲ್ಸ್ ವಿಭಾಗದ ಮತ್ತಷ್ಟು ಯುನಿಟ್‌ಗಳು ಆಗಮಿಸುವ ನಿರೀಕ್ಷೆ ಇದ್ದು, ಗಡಿಯ ಗುಂಟ ಸೇನಾ ಬಲವು 30 ಸಾವಿರಕ್ಕೇರುವ ಸಾಧ್ಯತೆಗಳಿವೆ.
ಉಗ್ರರ ಒಳನುಸುಳುವಿಕೆಯೇ ಚಿಂತೆಯ ವಿಷಯವಾಗಿದ್ದು, ಇದು ಸೇನಾಪಡೆಗಳಿಗೆ ಮಾತ್ರವಷ್ಟೇ ಅಲ್ಲ, ಸರಕಾರಕ್ಕೂ ತಲೆನೋವಿನ ಸಂಗತಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳೂ ಸದ್ಯದಲ್ಲೇ ನಡೆಯಲಿದ್ದು, ಹೆಚ್ಚುತ್ತಿರುವ ಒಳನುಸುಳುವಿಕೆಯನ್ನು ನಿಗ್ರಹಿಸಲು, ಹೆಚ್ಚುವರಿ ಪಡೆಗಳ ನಿಯೋಜನೆ ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಡಲಾಗಿದೆ.
ಇದೇ ವೇಳೆ, ಇದಕ್ಕೆ ಸಂಬಂಧಿಸಿದ ಮತ್ತೊಂದು ಘಟನೆಯಲ್ಲಿ, ಸಾಂಬಾ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕಿಸುವ ಬೇಲಿಯು ತುಂಡಾಗಿರುವುದನ್ನು ಗಡಿ ಭದ್ರತಾ ಪಡೆಯ ಡಿಜಿ ಎ.ಕೆ.ಮಿತ್ರಾ ದೃಢಪಡಿಸಿದ್ದಾರೆ. ಇದು ನಮಗೆ ಪಾಠವಾಗಿದ್ದು, ನಾವಿದರಿಂದ ಕಲಿತಿದ್ದೇವೆ ಎಂದು ತಿಳಿಸಿರುವ ಅವರು, ಇತ್ತೀಚಿನ ಒಳನುಸುಳುವಿಕೆ ಪ್ರಯತ್ನದಲ್ಲಿ ಪಾಕಿಸ್ತಾನಿ ರೇಂಜರ್‌ಗಳ ಪಾತ್ರ ತಳ್ಳಇ ಹಾಕುವಂತಿಲ್ಲ, ಯಾಕೆಂದರೆ ಈ ರೇಂಜರ್‌ಗಳು ಬಳಸುವ ಕಾರ್ಟ್ರಿಜ್‌ಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಮೇ 9ರಂದು ನಡೆದ ಕಾಡಾಕಾಡಿ ಹೋರಾಟದಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ನಾಲ್ಕು ಮಂದಿ ನಾಗರಿಕರು, ಇಬ್ಬರು ಸೈನಿಕರು ಹಾಗೂ ಒಬ್ಬ ಫೋಟೋ ಪತ್ರಕರ್ತ ಕೂಡ ಮೃತಪಟ್ಟಿದ್ದರು.
|