ಪಶ್ಚಿಮ ಬಂಗಾಳ ಪಂಚಾಯತ್‌ನ ಮೂರನೇ ಹಾಗೂ ಅಂತಿಮ ಹಂತದ ಚುನಾವಣೆಯ ಮತದಾನ ಏಳು ಜಿಲ್ಲೆಗಳಲ್ಲಿ ಭಾನುವಾರ ಬೆಳಿಗ್ಗೆ ಆರಂಭಗೊಂಡಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪಶ್ಚಿಮಬಂಗಾಳದ ಮೂರನೇ ಹಾಗೂ ಅಂತಿಮ ಹಂತದ ಪಂಚಾಯತ್ ಚುನಾವಣೆಯು ಏಳು ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಬಿರ್ಬುಮ್, ಜಲಪಾಯ್‌ಗುರಿ, ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ ದಿನಜ್‌ಪುರ್, ಉತ್ತರ ದಿನಜ್‌ಪುರ್ ಮತ್ತು ಕೊಕ್ ಬೆಹ್ರಾಗಳಲ್ಲಿ ಬೆಳಿಗ್ಗಿನಿಂದಲೇ ಮತದಾನ ಆರಂಭಗೊಂಡಿದೆ.
ಬುಧವಾರ ನಡೆದ ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ 24ದಕ್ಷಿಣ್ ಪರಾಗಣ್ ಕ್ಷೇತ್ರದ ಬಸಂತಿ ಕ್ಷೇತ್ರದ ಸುಮಾರು 15 ಬೂತ್‌ಗಳಲ್ಲಿ ಇಂದು ಮರು ಮತದಾನ ನಡೆಸಲಾಗುತ್ತಿದೆ.
ಬಸಂತಿ ಕ್ಷೇತ್ರದ 15 ಬೂತ್‌ಗಳಲ್ಲಿ ನಕಲಿ ಮತದಾನ ಮಾಡಿದ ಕುರಿತು ದೂರನ್ನು ದಾಖಲಿಸಿಕೊಂಡಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಪಶ್ಚಿಮಬಂಗಾಲದ 18 ಜಿಲ್ಲೆಗಳಲ್ಲಿ ಪ್ರಥಮ ಹಂತದ ಚುನಾವಣೆ ಮೇ 11ರಂದು ನಡೆದಿದ್ದು, ಮೇ 14ರಂದು ಎರಡನೇ ಹಂತದ ಮತದಾನ ನಡೆದಿತ್ತು. ಮೇ 21ರಂದು ಮತಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ಆಯೋಗದ ಸಹಾಯಕ ಕಾರ್ಯದರ್ಶಿ ಆರ್.ಎನ್. ಮಂಡಲ್ ಅವರು ವಿವರಿಸಿದ್ದಾರೆ.
ಬಿಗಿ ಬಂದೋಬಸ್ತ್: ಗ್ರಾಮ ಪಂಚಾಯತ್ 3ನೇ ಹಾಗೂ ಅಂತಿಮ ಹಂತದ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು,ಚುನಾವಣೆಯಲ್ಲಿ ಹಿಂಸಾಚಾರ ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ಶನಿವಾರದಂದು ಬಾಂಗ್ಲಾ ಗಡಿಪ್ರದೇಶವನ್ನು ಬಂದ್ ಮಾಡಿರುವುದಾಗಿ ಉತ್ತರ ಬಂಗಾಳದ ಪೊಲೀಸ್ ಮಹಾನಿರ್ದೇಶಕ ಕೆ.ಎಲ್. ತಾಮ್ತಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಭದ್ರತೆಗಾಗಿ ನೂರು ಅರೆಸೇನಾ ಪಡೆಯನ್ನು ಮಾಲ್ಡಾ, ದಕ್ಷಿಣ ದಿಂಜಾಪುರ್ ಮತ್ತು ಉತ್ತರ ದಿಂಜಾಪುರ್ ನಿಯೋಜಿಸಲಾಗಿದ್ದು, ಬಾಂಗ್ಲಾ ಮತ್ತು ಅಸ್ಸಾಂ ಗಡಿಭಾಗವಾದ ಕೊಕ್ ಬೆಹಾರ್ ಜಿಲ್ಲೆಯಲ್ಲಿ 300 ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂರನೇ ಹಂತದ ಚುನಾವಣೆಯಲ್ಲಿ 35 ಮತದಾನ ಕೇಂದ್ರಗಳು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದ್ದು, ಉಳಿದ ಎಲ್ಲಾ ಮತದಾನ ಕೇಂದ್ರಗಳಲ್ಲಿ ಶಸ್ತ್ರಸಜ್ಜಿತ ಗಾರ್ಡ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಐಜಿಪಿ ಹೇಳಿದ್ದಾರೆ.
ಜಲಪಾಯ್‌ಗುರಿಯಲ್ಲಿ 2,800 ಮಂದಿ ಪೊಲೀಸರು, ಮಾಲ್ಡಾದಲ್ಲಿ 2 ಸಾವಿರ, ಉತ್ತರ ದಿನಾಜ್‌ಪುರ್ 1,400, ದಕ್ಷಿಣ ದಿನಾಜ್‌ಪುರ್ 900 ಮತ್ತು ಕೊಕ್ ಬೆಹಾರ್ 200 ಮಂದಿ ಹೆಚ್ಚುವರಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
|