ಪಾಕಿಸ್ತಾನದಲ್ಲಿ ಹೊಸ ಪ್ರಜಾಪ್ರಭುತ್ವ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕದ ಪ್ರಥಮ ಉನ್ನತ ಮಟ್ಟದ ಸಂಪರ್ಕದ ವೇಳೆ, ಇತ್ತೀಚಿಗಿನ ಅಕ್ರಮ ನುಸುಳುವಿಕೆ ಮತ್ತು ಭಯೋತ್ಪಾದನಾ ದಾಳಿಗಳ ಹಿನ್ನೆಲೆಯಲ್ಲಿ, ಗಡಿಯಾಚೆಗಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಭಾರತವು ಪಾಕಿಸ್ತಾನವನ್ನು ಒತ್ತಾಯಿಸಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಮತ್ತು ಅವರ ಪಾಕಿಸ್ತಾನ ಸಹವರ್ತಿ ಶಾ ಮೆಹಮೂದ್ ಖುರೇಶಿ ಅವರುಗಳ ನಡುವೆ ಬುಧವಾರ ನಡೆಯಲಿರುವ ಮಾತುಕತೆಯಲ್ಲಿ, ಭಾರತವು ಪಾಕಿಸ್ತಾನದೊಂದಿಗೆ ತನ್ನ ಸಂಬಂಧಗಳನ್ನು ಮುಂದುವರಿಸಲು ಬಯಸುತ್ತಿದೆ, ಆದರೆ ಮಾತುಕತೆ ಪ್ರಕ್ರಿಯೆಗಳು ಯಶಸ್ವಿಯಾಗಬೇಕಿದ್ದರೆ, ಶಾಂತಿಯ ವಾತಾವರಣ ಅತ್ಯಗತ್ಯ ಎಂಬ ಅಂಶವನ್ನು ಸ್ಪಷ್ಟಪಡಿಸಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವರ ಮಾತುಕತೆಗಳ ದಿನ ಮುಂಚಿತವಾಗಿ, ಭಾರತದ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ತನ್ನ ಪಾಕಿಸ್ತಾನ ಸಹವರ್ತಿ ಸಲ್ಮಾನ್ ಬಶೀರ್‌ರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ನಾಲ್ಕನೆಯ ಸುತ್ತಿನ ಸಮಗ್ರ ಮಾತುಕತೆ ತಾತ್ಕಾಲಿಕ ತಡೆಯ ಬಳಿಕ ಮುಂದುವರಿಯುತ್ತಿದ್ದು, ಈ ವೇಳೆ ಭಯೋತ್ಪಾದನೆಯ ಹೊರತಾಗಿ ಜಮ್ಮು - ಕಾಶ್ಮೀರ, ಸಿಯಾಚಿನ್, ಸರ್‌ಕ್ರೀಕ್ ಹಾಗೂ ವಿಶ್ವಾಸ ವೃದ್ಧಿಯ ಹಲವು ವಿಚಾರಗಳ ಕುರಿತು ಇಬ್ಬಣಗಳು ಚರ್ಚಿಸಲಿವೆ.
|