ಒಂದು ಒಕ್ಕೂಟ ಏಜೆನ್ಸಿ ಮೂಲಕ ಭಯೋತ್ಪಾದನೆಯನ್ನು ಹತ್ತಿಕ್ಕುವ ಯೋಚನೆಯನ್ನು ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟವು(ಎನ್‌ಡಿಎ) ಹರಿಬಿಟ್ಟಿತ್ತು ಎಂದು ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.
ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಂಘಟಿತ ಅಪರಾಧಗಳನ್ನು ಹತ್ತಿಕ್ಕಲು ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರಕಾರಗಳು ಪ್ರಸ್ತಾವಿಸಿರುವ ಕಾನೂನನ್ನು ಕೇಂದ್ರವು ಇನ್ನೂ ಅನುಮತಿಸಿಲ್ಲ, ಆದರೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅಂತಹ ಕಾನೂನುಗಳಿಗೆ ಅದು ಹಸಿರು ನಿಶಾನೆ ತೋರಿದೆ ಎಂದು ಆಪಾದಿಸಿದರು.
ಕಾಂದಹಾರ್ ವಿಮಾನ ಅಪಹರಣದ ವೇಳೆ ಪ್ರಯಾಣಿಕರ ಬಿಡುಗಡೆಗೆ ಪ್ರತಿಯಾಗಿ, ಉಗ್ರರನ್ನು ಬಿಡುಗಡೆ ಮಾಡಿರುವ ಬಿಜೆಪಿ ಭಯೋತ್ಪಾದನೆಯ ಮುಂದೆ ಮಂಡಿಯೂರಿದೆ ಎಂಬ ಕಾಂಗ್ರೆಸ್ ಆಪಾದನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾನಾಗ ಗೃಹಮಂತ್ರಿಯಾಗಿದ್ದೆ ಎಂದು ನುಡಿದರು.
ಈ ಘಟನೆಗೆ ಸಂಬಂಧಿಸಿದಂತೆ, ಸರ್ವಪಕ್ಷಗಳ ಸಭೆ ಕರೆದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿತ್ತು, ರಾಜ್ಯಸಭಾ ನಾಯಕನಾಗಿ ಈಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಆ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು 160 ಪ್ರಯಾಣಿಕರ ಸರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ನುಡಿದರು.
ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿಯ ಕಾನೂನುಗಳಿಗೆ ಹೋಲಿಸಿದರೆ, ನವೀಕೃತ ಪೋಟಾ(ಪಿಒಟಿಎ) ತುಂಬ ಮೆದುವಾಗಿದೆ ಎಂದು ಆಡ್ವಾಣಿ ನುಡಿದರು.
ಉಗ್ರವಾದವನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯದ ಗುಪ್ತಚರ ಏಜೆನ್ಸಿಗಳ ನಡುವೆ ಸಹಮತ ಪ್ರಮುಖವಾಗಿದೆ ಎಂದು ವಿಪಕ್ಷ ನಾಯಕ ಆಡ್ವಾಣಿ ಈ ಸಂದರ್ಭದಲ್ಲಿ ಅಭಿಪ್ರಾಯಿಸಿದರು.
|