ಅಧಿಕೃತ ಅಧಿಕಾರಿಗಳ ಸಂಖ್ಯಾ ಬಲಕ್ಕಿಂತ ಸೇನೆಯು ಶೇ.24ಕ್ಕಿಂತ ಅಧಿಕ ಸ್ಥಾನಗಳ ಕೊರತೆ ಅನುಭವಿಸುತ್ತಿದ್ದು, ಇದಕ್ಕೆ ಸರಕಾರದ 'ದೂಷಪೂರಿತ' ಆಯ್ಕಾ ಪ್ರಕ್ರಿಯೆ ಕಾರಣ ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸ್ತುತ ಭಾರತೀಯ ಸೇನೆಯು 11,238 ಅಧಿಕಾರಿಗಳ, ಅಂದರೆ ಶೇ.24.1ದಷ್ಟು ಕೊರತೆ ಅನುಭವಿಸುತ್ತಿದೆ. (ಸೇನೆಯು ಒಟ್ಟು 46,615 ಅಧಿಕಾರಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿದೆ) ಅಂತೆಯೆ ಸೇನೆಯ ಇತರ ಎರಡು ದಳಗಳೂ ಸಹ ಇಂತಹುದೇ ಸಮಸ್ಯೆ ಅನುಭವಿಸುತ್ತಿದೆ ಎಂದು ಮೇಜರ್ ಜನರಲ್ ಮೃಣಾಲ್ ಸುಮನ್ ಅವರು 'ಇಂಡಿಯನ್ ಡಿಫೆನ್ಸ್ ರಿವ್ಯೂ'ವಿನ ಮುಂಬರುವ ಸಂಚಿಕೆಗೆ ಬರೆದಿರುವ ತನ್ನ ಲೇಖನದಲ್ಲಿ ಹೇಳಿದ್ದಾರೆ.
ಪರಿಸ್ಥಿತಿಯು ದಿನೇದಿನೇ ಹದಗೆಡುವಂತೆ ತೋರುತ್ತಿದೆ ಎಂದಿರುವ ಅವರು, ಇತ್ತೀಚೆಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಯ ಪ್ರವೇಶಕ್ಕೆ, 300 ಸ್ಥಾನಗಳಿಗೆ ಕೇವಲ 172 ಸ್ಥಾನಗಳು ಮಾತ್ರ ಲಭ್ಯವಾಗಿದ್ದು ಇದು ಸರಕಾರದ ಕಳವಳಕ್ಕೆ ಕಾರಣವಾಗಿದೆ ಎಂದಿದ್ದಾರೆ. ಸೇವಾ ಜೀವನದ ಕಾಠಿಣ್ಯ ಮತ್ತು ಅಸಮರ್ಪಕ ಹಣಕಾಸು ಪ್ಯಾಕೇಜುಗಳಿಗೂ ಇದಕ್ಕೂ ಸಂಬಂಧದ ಕುರಿತ ಅಧ್ಯಯನ ಆಧಾರದಲ್ಲಿ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಪ್ರತಿಸ್ಪಂದನ ಸಾಕಷ್ಟಿಲ್ಲ ಎಂಬುದನ್ನು ಅಲ್ಲಗಳೆದಿದ್ದಾರೆ. "ಈ ಸ್ಥಾನಕ್ಕೆ ಅರ್ಜಿ ಸಲ್ಲಿಸಲಾಗಿರುವ ಪ್ರಮಾಣ 431, ಸಂಯೋಜಿತ ನಾಗರಿಕ ಸೇವಾ ಪರೀಕ್ಷೆಗಳ ಅನುಪಾತಕ್ಕೆ ಹೋಲಿಸಿದರೆ ಅದು 319. ಕೇಂದ್ರೀಯ ಪೊಲೀಸ್ ಪಡೆಯ ಸಂಖ್ಯೆ 362. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೇವಾ ಪರೀಕ್ಷೆಗಳ ಅರ್ಜಿದಾರರ ಸಂಖ್ಯೆ ಅನುಕ್ರಮವಾಗಿ 284 ಮತ್ತು 46 ಎಂಬುದಾಗಿ ಅಂಕಿಸಂಖ್ಯೆಗಳನ್ನು ಉದಾಹರಿಸಿದ್ದಾರೆ.
ಕಠಿಣ ಸೇವಾ ಜೀವನ ಹಾಗೂ ಅಸಮರ್ಪಕ ವೇತನದ ಕಾರಣವನ್ನು ತಳ್ಳಿಹಾಕುವ ಅವರು ಆಯ್ಕಾ ಪ್ರಕ್ರಿಯೆಯಲ್ಲಿ ಭಾರೀ ಮಾರ್ಪಾಡಿಗಾಗಿ ಸಲಹೆ ನೀಡಿದ್ದಾರೆ.
|