ಸಂಘಟಿತ ಅಪರಾಧಗಳ ಮಹಾರಾಷ್ಟ್ರ ನಿಗ್ರಹ ಕಾಯ್ದೆ(ಮೋಕಾ)ಯಡಿಯಲ್ಲಿ ಮಾಜಿ ಭೂಗತ ದೊರೆ, ಶಾಸಕ ಅರುಣ್ ಗಾವ್ಳಿ ವಿರುದ್ಧ ಮಂಗಳವಾರ ಮತ್ತೊಂದು ದೂರು ದಾಖಲಾಗಿದೆ
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಶಿವ ಸೇನೆಯ ಕಾರ್ಪೋರೇಟರ್ ಕಮಲಾಕರ್ ಜಮಸಂದಿಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಈ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಮರಿಯಾ ಅವರು ಸುದ್ದಿಗಾರಿಗೆ ತಿಳಿಸಿದ್ದಾರೆ.
ಜಮಸಂದಿಕರ್ ಅವರ ಹತ್ಯೆಗಾಗಿ, ಸಾಹೇಬ್‌ರಾವ್ ಬಿನ್‌ತಾಡೆ ಮತ್ತು ಬಾಳಾ ಸುರ್ವೆ ಎಂಬಿಬ್ಬರಿಗೆ ಅರುಣ್ ಗಾವ್ಳಿ ಸುಫಾರಿ ನೀಡಿರುವುದಾಗಿ ಮಾರಿಯಾ ಹೇಳಿದರು.
ವೈಯಕ್ತಿಕ ದ್ವೇಷ ಮತ್ತು ಆಸ್ತಿ ಸಂಬಂಧಿ ಜಗಳದಿಂದಾಗಿ ಶಿವಸೇನೆಯ ಕಾರ್ಪೋರೇಟರ್ ಆಗಿದ್ದ ಕಮಲಾಕರ್ ಜಮಸಂದಿಕರ್ ಅವರನ್ನು ಕೊಲೆಗೈಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಕ್ರೈಂ ಬ್ರ್ಯಾಂಚ್ ಹತ್ತು ಮಂದಿಯನ್ನು ಬಂಧಿಸಿತ್ತು. ಇದಲ್ಲದೆ, ಸ್ಥಳೀಯ ಪೊಲೀಸರು ಮತ್ತೆ ಏಳು ಮಂದಿಯನ್ನು ಸೆರೆ ಹಿಡಿದಿರುವುದಾಗಿ ತಿಳಿಸಿದರು.
ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗಾವ್ಳಿ ಹಾಗೂ ಸಹೋದರ ವಿಜಯ್ ಅಹಿರ್ ಸೇರಿದಂತೆ ಇತರ ಏಳು ಮಂದಿಯ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಇವರನ್ನು ಏಪ್ರಿಲ್ 29 ರಂದು ಬಂಧಿಸಲಾಗಿತ್ತು.
|