ಸಂಶಯಾಸ್ಪದ ಸಾವಿಗೀಡಾಗಿರುವ ನೋಯ್ಡಾದ ಅರುಶಿಯ ತಂದೆ ರಾಕೇಶ್ ತಲ್ವಾರ್ ಮೊದಲ ಬಾರಿಗೆ ಮಾಧ್ಯಮದೆದುರು ಮಾತನಾಡಿದ್ದು, ತನ್ನ ಮಗಳ ಕೊಲೆಗೆ ಸಂಬಂಧಿಸಿದಂತೆ ತನಗೇನು ತಿಳಿದಿಲ್ಲ ಎಂದು ಹೇಳಿದ್ದಾರೆ.
ಮೇ 16ರಂದು ನಡೆದಿರುವ ಕೊಲೆಗೆ ಸಂಬಂಧಿಸಿದಂತೆ ತನಗೇನಾದರು ತಿಳಿದಿದ್ದರೆ,ನಾನು ಮಾಧ್ಯಮಗಳಿಗೆ ತಿಳಿಸುತ್ತಿದ್ದೆ. ಕೊಲೆಯಲ್ಲಿ ತನ್ನ ಕೈವಾಡ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಯ ಮುಂಚಿತಾಗಿ ರಾಕೇಶ್ ದಂಪತಿಗಳು ನೋಯ್ಡಾ ಪೊಲೀಸರಿಗೆ ನೀಡುತ್ತಿದ್ದ ವಿಭಿನ್ನ ಹೇಳಿಕೆಗಳು ಅವರ ಮೇಲೆಯೇ ಸಂಶಯ ಹುಟ್ಟಿಸಿದೆ.
ಯಾವಾಗಲೂ ಸಂಬಂಧಿಯೊಬ್ಬನ ಜತೆಗೇ ಈ ಇರುವ ಈ ಕುಟುಂಬವು ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಹೇಳಿಕೆ ನೀಡಿದ್ದಿರಲಿಲ್ಲ. ಕೊಲೆಗೀಡಾಗಿರುವ 14ರ ಬಾಲೆ ಅರುಶಿಯನ್ನು ಕೊಲೆಗೈಯುವ ಮುನ್ನ ಅವಳಿಗೆ ಹೊಡೆದಿದ್ದು, ಮೂರ್ನಾಲ್ಕು ಮಂದಿ ಸೇರಿ ಈ ಕೃತ್ಯ ಎಸಗಿರುವಂತೆ ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.
ನೋಯ್ಡಾದ ಫೋರ್ಟಿಷ್ ಆಸ್ಪತ್ರೆಯಲ್ಲಿ ದಂತವೈದ್ಯರಾಗಿರುವ ಡಾ. ರಾಜೇಶ್ ತಲ್ವಾರ್ ಎಂಬವರ ಪುತ್ರಿ ಆಯುಶಿ ತಲ್ವಾರ್‌ಳ ಮೃತದೇಹ ಮೇ 16ರಂದು ಪತ್ತೆಯಾಗಿತ್ತು.
ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಆಯುಶಿ ತಲ್ವಾರ್ ತಾಯಿಯೂ ಕೂಡಾ ದಂತ ವೈದ್ಯೆಯಾಗಿದ್ದಾರೆ. ಅವಳ ಮೃತದೇಹವು ಕಳೆದ ಶುಕ್ರವಾರ ಮುಂಜಾನೆ ಅವರ ಸೆಕ್ಟರ್-25 ನಿವಾಸದ ಎದುರು ಪತ್ತೆಯಾಗಿತ್ತು. ಬಾಲಕಿಯ ತಲೆ ಮೇಲೆ ಎರಡು ಬಾರಿ ಮತ್ತು ಕುತ್ತಿಗೆಯ ಬದಿಗೆ ಒಂದು ಬಾರಿ ಆರೋಪಿಯ ಚೂರಿಯಿಂದ ಇರಿದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿತ್ತು.
ಕೊಲೆಗೆ ಸಂಬಂಧಿಸಿದಂತೆ ಮನೆಗೆಲಸದಾಳುವಿನ ಮೇಲೆ ಆರಂಭದಲ್ಲಿ ಸಂಶಯ ಪಡಲಾಗಿತ್ತಾದರೂ, ಆತನೂ ಕೊಲೆಗೀಡಾಗಿದ್ದು, ಪ್ರಕರಣ ಮತ್ತಷ್ಟು ಜಟಿಲವಾಗಿತ್ತು.
|