ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣಾ ಫಲಿತಾಂಶಗಳು ಹೊರಬಿದ್ದಿದ್ದು, ಆಡಳಿತಾರೂಢ ಸಿಪಿಎಂ ನೇತೃತ್ವದ ಎಡರಂಗ ಸರಕಾರವು ತೃಣಮೂಲ ಕಾಂಗ್ರೆಸ್ ಎದುರು ತೀವ್ರ ಮುಖಭಂಗವುಂಟು ಅನುಭವಿಸಿದ್ದು, ಹಿಂಸಾಚಾರಪೀಡಿತ ನಂದಿಗ್ರಾಮ ಮತ್ತು ಸಿಂಗೂರು ಅದರ ಕೈತಪ್ಪಿ ಹೋಗಿದೆ.
ಸಿಂಗೂರಿನ ಮೂರು ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ ತೃಣಮೂಲ ಅಭ್ಯರ್ಥಿಗಳೆದುರು ಎಡರಂಗವು ದಯನೀಯ ಸೋಲನ್ನಪ್ಪಿದೆ.
ಈ ಚುನಾವಣೆಗಳು ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಸರಕಾರವು ಕೈಗಾರಿಕೆಗಳಿಗಾಗಿ ಕೃಷಿಭೂಮಿ ವಶ ಮಾಡಿಕೊಳ್ಳುವ ನೀತಿಗೆ ಲಿಟ್ಮಸ್ ಪರೀಕ್ಷೆ ಎಂದೇ ಪರಿಭಾವಿಸಲಾಗಿದ್ದು, ಹಿಂಸಾಚಾರ ಪೀಡಿತ ನಂದಿಗ್ರಾಮವಿರುವ ಪೂರ್ವ ಮಿಡ್ನಾಪುರ ಜಿಲ್ಲಾ ಪಂಚಾಯತ್ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕೈವಶವಾಗಿದೆ. ಇದುವರೆಗೆ ಘೋಷಿತ 53 ಸ್ಥಾನಗಳಲ್ಲಿ 32ನ್ನು ತೃಣಮೂಲ ಗೆದ್ದುಕೊಂಡಿದೆ. 2003ರಲ್ಲಿ ತೃಣಮೂಲವು ಕೇವಲ ಎರಡು ಸ್ಥಾನಗಳನ್ನಷ್ಟೇ ಗೆದ್ದುಕೊಂಡಿತ್ತು.
ಆದರೆ ರಾಜ್ಯದ ಇತರೆಡೆಗಳಲ್ಲಿ ಎಡರಂಗವು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳಿಂದ ಪ್ರಬಲ ಪೈಪೋಟಿ ಎದುರಿಸುತ್ತಿದೆ.
ಗುಂಡು, ಬಾಂಬ್:
ಈ ಮಧ್ಯೆ, ಫಲಿತಾಂಶ ಘೋಷಣೆಯಾಗುತ್ತಿರುವಂತೆಯೇ ನಂದಿಗ್ರಾಮ ಪ್ರದೇಶದಲ್ಲಿ ಸಿಪಿಎಂ ಮತ್ತು ತೃಣಮೂಲ ಕಾರ್ಯಕರ್ತರ ಮಧ್ಯೆ ಬಾಂಬ್ ದಾಳಿ, ಗುಂಡಿನ ಚಕಮಕಿ ಆರಂಭವಾಗಿದೆ.
|