ನಾಗಾಲೋಟದಲ್ಲಿ ಓಡುತ್ತಿರುವ ಹಣದುಬ್ಬರ ಮತ್ತು ಭಾರತ-ಅಮೆರಿಕ ಅಣು ಒಪ್ಪಂದ ವಿವಾದವನ್ನು ಸೆರಗಿನಲ್ಲಿ ಕಟ್ಟಿಕೊಂಡು ಯುಪಿಎ ಸರಕಾರ ತನ್ನ ಕೊನೆಯ(ಐದನೆಯ) ವರ್ಷದ ಆಡಳಿತಕ್ಕೆ ಗುರುವಾರ ಕಾಲಿಟ್ಟಿದೆ.
ಬೆಲೆ ಏರಿಕೆ ಮತ್ತು ಹಣದುಬ್ಬರವು ಮನಮೋಹ್ ಸಿಂಗ್ ಸರಕಾರದ ಶವಪೆಟ್ಟಿಗೆಗೆ ಕೊನೆಯ ಮೊಳೆಯಾಗಲಿದೆ ಎಂದು ಸರಕಾರದ ಸ್ನೇಹಿತರು ಮತ್ತು ವಿರೋಧಿಗಳು ಎಚ್ಚರಿಸುತ್ತಿದ್ದಾರೆ. ಹಣದುಬ್ಬರ ನಿಯಂತ್ರಣಕ್ಕಾಗಿ ಸರಕಾರ ತಿಣುಕಾಡುತ್ತಿದ್ದರೂ ಹಣದುಬ್ಬರ ಮಾತ್ರ ಏರುತ್ತಲೇ ಹೋಗುತ್ತಿದೆ.
ಸಂಯುಕ್ತ ರಾಜಕೀಯದಲ್ಲಿ ಸಿಲುಕಿಕೊಂಡಿರುವ ಕಾರಣ, ಕಾಂಗ್ರೆಸ್ ನೇತೃತ್ವದ ಯುಪಿಎ, ಹಗ್ಗದಮೇಲಿನ ನಡಿಗೆ ಮಾಡಬೇಕಿದೆ. ಈ ಮೂಲಕ ಆ ಕಡೆ ಎಡಪಕ್ಷಗಳನ್ನು ಸಿಟ್ಟಿಗೆಬ್ಬಿಸದಂತೆ ಮತ್ತು ಇತ್ತಕಡೆ ಹಣದುಬ್ಬರಕ್ಕೆ ನಿಯಂತ್ರಣ ಹೇರುತ್ತಾ ಮತದಾರರನ್ನು ಓಲೈಸಬೇಕಿದೆ.
ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ ಎಡಪಕ್ಷಗಳು ಭಾರತ-ಅಮೆರಿಕ ನಡುವಿನ ಅಣುವ್ಯವಹಾರವನ್ನು ವಿರೋಧಿಸುತ್ತಿದ್ದು, ಅವರ ಒಪ್ಪಿಗೆ ಇಲ್ಲದ ಕಾರಣ ಇದರ ಮುಂದುವರಿಕೆಗೆ ಅಡ್ಡಿಯುಂಟಾಗಿದೆ. ಏತನ್ಮಧ್ಯೆ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳು ವಿರೋಧಪಕ್ಷಗಳ ಜತೆ ಸೇರಿಕೊಂಡು ಟೀಕಿಸಲಾರಂಭಿಸಿವೆ.
ಯುಪಿಎಯು ಜನತೆಗೆ ವಾರ್ಷಿಕ ವರದಿಯೊಂದಿಗೆ ಸಜ್ಜಾಗಿದೆ. ಈ ವರದಿಯಲ್ಲಿ ಅದು ನಾಲ್ಕುವರ್ಷಗಳ ಅವಧಿಯ ತನ್ನ ಸಾಧನೆಗಳನ್ನು ಹೇಳಿಕೊಂಡಿದೆ.
ರಾಜಕಾರಣಿಯಾಗಿ ಪರಿವರ್ತನೆಗೊಂಡ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ನೇತೃತ್ವದ ಸರಕಾರವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಮೈತ್ರಿ ಸರಕಾರವು ಎಂದಿಗೂ ಕಾಂಗ್ರೆಸ್‌ನ ಆಯ್ಕೆಯಾಗಿರಲಿಲ್ಲ, ಬದಲಿಗೆ ಅದೊಂದು ಬಲವಂತದಂತಾಗಿದೆ.
ಕಾಂಗ್ರೆಸ್‌ನ ಮಿತ್ರಪಕ್ಷ ಆರ್‌ಜೆಡಿ ಹೇಳುವ ಪ್ರಕಾರ ಪುರಾತನ ಪಕ್ಷವಾದ ಕಾಂಗ್ರೆಸ್, ಮೈತ್ರಿಯ ಧರ್ಮವನ್ನು ಕಾಪಾಡಬೇಕು, ಮತ್ತು ಕೇಂದ್ರದಲ್ಲಿರುವುದು ಕಾಂಗ್ರೆಸ್ ಸರಕಾರವಲ್ಲ ಬದಲಿಗೆ ಅದು ಯುಪಿಎ ಸರಕಾರ ಎಂಬುದನ್ನು ಅರಿತುಕೊಳ್ಳಬೇಕು. ಸರಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಮಿತ್ರಪಕ್ಷಗಳೊಂದಿಗೆ ಸಮಾಲೋಚಿಸದೆಯೇ ಸಂಸತ್ತಿನಲ್ಲಿ ಮಂಡಿಸಿದ ವೇಳೆ ಅದು ಈ ಟೀಕೆ ಮಾಡಿದೆ.
ನಾಲ್ಕು ವರ್ಷ ಪೂರೈಸಿರುವ ಪ್ರಯುಕ್ತ ಗುರುವಾರ ರಾತ್ರಿ ಔತಣ ಕೂಟವನ್ನು ಹಮ್ಮಿಕೊಂಡಿರುವ ಯುಪಿಎ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಆಹ್ವಾನ ನೀಡಿದೆ.
|