ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 34 ಬಾಂಗ್ಲಾದೇಶದ ಪ್ರಜೆಗಳನ್ನು ಉತ್ತರಖಂಡ ಪೊಲೀಸರು ಗುರುವಾರ ಗಡಿಪಾರು ಮಾಡಿದ್ದಾರೆ.
ಮೇ 13ರಂದು ಜೈಪುರದಲ್ಲಿ ಸಂಭವಿಸಿದ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ, ಉತ್ತರಖಂಡ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಅಕ್ರಮವಾಗಿ ನೆಲೆಸಿರುವ 34 ಬಾಂಗ್ಲಾದೇಶಿಯರನ್ನು ಬಿಎಸ್‌ಎಫ್ ಸಿಬ್ಬಂದಿ ಮೇಲುಸ್ತುವಾರಿಯಲ್ಲಿ ರೈಲಿನ ಮೂಲಕ ಪಶ್ಚಿಮಬಂಗಾಳಕ್ಕೆ ಕಳುಹಿಸಲಾಗುವುದು. ಅಲ್ಲಿಂದ ಬಾಂಗ್ಲಾದೇಶದ ಗಡಿಯಲ್ಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ರೂರ್ಕಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಜೋಷಿ ತಿಳಿಸಿದ್ದಾರೆ.
"ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಕ್ಕಾಗಿ ಈ ಬಾಂಗ್ಲಾದೇಶಿ ಪ್ರಜೆಗಳನ್ನು ಇದಕ್ಕೆ ಮುಂಚೆ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ 1000 ರೂ. ದಂಡ ವಿಧಿಸಿ, ಇದಕ್ಕೆ ತಪ್ಪಿದಲ್ಲಿ ಹೆಚ್ಚುವರಿ 10 ದಿನಗಳ ಕಾರಾಗೃಹವಾಸವನ್ನು ವಿಧಿಸಲಾಗಿತ್ತು" ಎಂದು ಅವರು ಹೇಳಿದರು.
ಸ್ಫೋಟದ ಹಿನ್ನೆಲೆಯಲ್ಲಿ ಪೊಲೀಸರು ಉತ್ತರಖಂಡದ ರಾಜಧಾನಿ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಿದ್ದಾರೆ. ಡೆಹ್ರಾಡೂನ್, ಉಧಾಂಸಿಂಗ್ ನಗರ್ ಮತ್ತು ಹರಿದ್ವಾರದಲ್ಲಿ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ವರದಿ ತಿಳಿಸಿದೆ.
|