ರಾಮಸೇತುವನ್ನು ಐತಿಹಾಸಿಕ ಮಹತ್ವವಿರುವ ರಾಷ್ಟ್ರೀಯ ಪರಂಪರೆ ಎಂದು ಘೋಷಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ವಿಶ್ವಹಿಂದೂ ಪರಿಷತ್ ಹರಿದ್ವಾರದಲ್ಲಿ ಜೂನ್ 15ರಿಂದ ಎರಡು ದಿನಗಳ ಕಾಲ 'ಸಾಧು'ಗಳ ಸಭೆ ನಡೆಸಲಿದೆ.
ವಿಶ್ವಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರು ಗುರವಾರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದು, ಈ ಸಭೆಯು 2,400 ಕೋಟಿ ವೆಚ್ಚದ ಸೇತುಸಮುದ್ರಂ ನೌಕಾ ಕಾಲುವೆ ಯೋಜನೆಯ ವಿರೋಧಿ ಚಳುವಳಿಯ ಬಲವರ್ಧನೆ ಮಾಡಲಿದೆ ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ರಾಮಸೇತು ಚಳುವಳಿಯನ್ನು ಬೆಂಬಲಿಸಿ 50 ಸಾವಿರಕ್ಕೂ ಅಧಿಕಮಂದಿಯ ಬೃಹತ್ ಚಳುವಳಿಯ ಕುರಿತೂ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು. ರಾಮಸೇತುವೆಯ ನಂಬುಗೆಯು ಶತಮಾಗಳಷ್ಟು ಹಳೆಯದು ಮತ್ತು ಇದರ ಅನುಯಾಯಿಗಳು ರಾಷ್ಟ್ರದಲ್ಲಿ ಮಾತ್ರವಲ್ಲದೆ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ನೈರುತ್ಯ ಏಷ್ಯದಾದ್ಯಂತ ಇಗದ್ದಾರೆ ಎಂದು ನುಡಿದರು.
ರಾಮಸೇತು ಕುರಿತಂತೆ ಸರ್ವೇಕ್ಷಣೆ ನಡೆಸುವಂತೆ ಪುರಾತತ್ವ ಇಲಾಖೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ನಿರ್ದೇಶನವನ್ನು ಅವರು ಈ ಸಂದರ್ಭದಲ್ಲಿ ಸ್ವಾಗತಿಸಿದರು.
ಈ ಯೋಜನೆಯ ಜಾರಿಯು ರಾಷ್ಟ್ರದ ಭದ್ರತೆಗೆ ಅಪಾಯಕಾರಿ ಎಂದು ನುಡಿದ ಸಿಂಘಾಲ್ ಇದು ಈ ಪ್ರದೇಶದಲ್ಲಿರುವ ಥೋರಿಯಂ ಸಂಗ್ರವನ್ನು ನಾಶಪಡಿಸಲಿದೆ ಎಂದು ನುಡಿದರು.
|