ಗುಜರಾತ್ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದು, ಇದರ ತನಿಖೆಗಾಗಿ ಐದು ಜನರ ಸಮಿತಿಯನ್ನು ನೇಮಕ ಮಾಡಲಾಗಿದೆ.
ಉಪನ್ಯಾಸಕನ ನಡವಳಿಕೆ ವಿರುದ್ಧ ಆಕ್ರೋಶಗೊಂಡ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ(ಎನ್‌ಎಸ್‌ಯುಐ) ಸದಸ್ಯರು ಗುರುವಾರ ಬೆಳಿಗ್ಗೆ ಶಿಕ್ಷಣ ಇಲಾಖೆಯಲ್ಲಿ ದಾಂಧಲೆ ನಡೆಸಿ, ಪೀಠೋಪಕರಣ, ಬಾಗಿಲು, ಕಿಟಕಿಗಳನ್ನೆಲ್ಲಾ ಪುಡಿಗೈದಿರುವುದಾಗಿ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ವಿಶ್ವವಿದ್ಯಾನಿಲಯದ ಕುಲಪತಿ ಪ್ರಮಲ್ ತ್ರಿವೇದಿ, ಘಟನೆಯ ತನಿಖೆಗಾಗಿ ಐದು ಜನರ ಸಮಿತಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಪೊಲೀಸ್ ತನಿಖೆಯ ವಿವರಕ್ಕಾಗಿ ಎದುರು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಗುಜರಾತ್ ಯೂನಿವರ್ಸಿಟಿ ಶಿಕ್ಷಣ ಇಲಾಖೆಯ ಉಪನ್ಯಾಸಕ ಮನೋಜ್ ಶಾಸ್ತ್ರಿ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಶೋಷಣೆ ನಡೆಸುತ್ತಿರುವುದಾಗಿ ಮಹಿಳೆಯೊಬ್ಬರು ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗ ಬಯಸಿದ್ದ ಆ ಮಹಿಳೆ ವಿದ್ಯಾರ್ಥಿನಿಯಾಗಿದ್ದಾಗ ಆರು ವರ್ಷದ ಹಿಂದೆ ಈ ಉಪನ್ಯಾಸಕನನ್ನು ಭೇಟಿಯಾಗಿದ್ದರು. ಶಾಸ್ತ್ರಿ ಇದಿಗಾಗಲೇ ವಿವಾಹಿತನಾಗಿದ್ದರೂ, ಈಕೆಯನ್ನೂ ವಿವಾಹವಾಗುತ್ತೇನೆಂದು ನಂಬಿಸಿ, ಲೈಂಗಿಕ ಶೋಷಣೆ ಮಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ, ಹೊಸ ಮನೆಯೊಂದನ್ನು ಖರೀದಿಸಿ ಜತೆಯಾಗಿ ಬಾಳೋಣವೆಂದೂ ಭರವಸೆ ನೀಡಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ.
|