ರಾಜಸ್ಥಾನದ ಭಾರತ್‌ಪುರ ಜಿಲ್ಲೆಯಲ್ಲಿ ಗುಜ್ಜಾರ್ ಸಮುದಾಯದವರು ಪರಿಶಿಷ್ಟ ಪಂಗಡದ ಸ್ಥಾನಮಾನ ಕೋರಿ ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರ ಗೋಲಿಬಾರಿಗೆ ಐದು ಜನ ಬಲಿಯಾಗಿದ್ದಾರೆ. ಸತ್ತವರಲ್ಲಿ ಪೊಲೀಸೊಬ್ಬರು ಸೇರಿದ್ದಾರೆ.
ಪ್ರತಿಭಟನಾ ನಿರತ ಚಳುವಳಿಗಾರರು ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದು, ಕಾರ್ವಾರ್ ಪ್ರದೇಶದಲ್ಲಿ ಎರಡು ಪೊಲೀಸ್ ಜೀಪುಗಳಿಗೆ ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದಾಗ, ಗುಂಪು ಚದುರಿಸಲು ಪೊಲೀಸರು ಗುಂಡುಹಾರಿಸಿದ್ದರು. ಗಲಭೆಯ ವೇಳೆ ಪೊಲೀಸರೊಬ್ಬರೂ ಮೃತರಾಗಿದ್ದಾರೆ.
ಹಿಂಸಾಚಾರದ ಚಳುವಳಿಯಲ್ಲಿ ತೊಡಗಿದ್ದ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದು, ದುಮಾರಿಯ ಮತ್ತು ಕಾರ್ವಾರ್ ನಡುವಿನ ರೈಲ್ವೆ ಹಳಿಗೆ ಹಾನಿಯುಂಟುಮಾಡಲು ಪ್ರಯತ್ನಿಸಿದ್ದರು. ಹಿಂಸಾನಿರತರಾಗಿದ್ದವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರೂ ಪ್ರಯೋಜನವಾಗಲಿಲ್ಲ ಎಂದು ಮುಖ್ಯ ಗೃಹಕಾರ್ಯದರ್ಶಿ ವಿ.ಎಸ್.ಸಿಂಗ್ ಜೈಪುರದಲ್ಲಿ ಹೇಳಿದ್ದಾರೆ.
ಈ ಹಿಂದೆ ಗಜ್ಜಾರ್ ಪ್ರತಿಭಟನೆಯ ವೇಳೆ ನಡೆಸಲಾಗಿದ್ದ ಪ್ರತಿಭಟನೆಯ ವೇಳೆ ಪೊಲೀಸರ ಗೋಲಿಬಾರಿಗೆ 26 ಮಂದಿ ಆಹುತಿಯಾಗಿರುವ ಘಟನೆಗೆ ಒಂದು ವರ್ಷ ತುಂಬಲು ಇನ್ನೊಂದು ವಾರ ಬಾಕಿಯುಳಿದಿರುವಂತೆ ಈ ಘಟನೆ ಸಂಭವಿಸಿದೆ. ರಾಜಸ್ಥಾನ್ ಗುರ್ಜರ್ ಅರಕಶಾನ್ ಸಂಘರ್ಷ್ ಸಮಿತಿ ನಾಯಕ ಕಿರೊರಿ ಸಿಂಗ್ ಬೈಂಸ್ಲ ನೀಡಿದ ರೈಲ್ ರೋಕೋ ಕರೆಯನ್ವಯ ನಡೆಸಿದ ಪ್ರತಿಭಟನೆ ವೇಳೆಗೆ ಈ ಹಿಂಸಾಚಾರ ಸಂಭವಿಸಿದೆ.
ಪ್ರತಿಭಟನಾಕಾರರೂ ಸಹ ಪೊಲೀಸರತ್ತ ಗುಂಡುಹಾರಿಸಿದ್ದಾರೆ ಮತ್ತು ಸತ್ತವರ ಸಂಖ್ಯೆ ಐದಕ್ಕಿಂತ ಹೆಚ್ಚಿದೆ ಎಂದು ಅನಧಿಕೃತ ಮೂಲಗಳು ಹೇಳಿವೆ.
|