ನವದೆಹಲಿ: ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ 14ರ ಹರೆಯದ ಬಾಲಕಿ ಅರುಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ತಂದೆ ರಾಕೇಶ್ ತಲ್ವಾರ್‌ನನ್ನು ಬಂಧಿಸಲಾಗಿದೆ. ಅತ್ಯಂತ ಕುತೂಹಲ ಕೆರಳಿಸಿರುವ ಅರುಶಿ ಮತ್ತು ಮನೆಸೇವಕ ಹೇಮರಾಜ್ ಜೋಡಿ ಹತ್ಯೆ ಪ್ರಕರಣದಲ್ಲಿ ಅರುಶಿಯ ತಂದೆ ಡಾ.ರಾಜೇಶ್ ತಲ್ವಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನೊಯ್ಡಾ ಪೊಲೀಸರು ತಲ್ವಾರ್‌ರನ್ನು ತನಿಖೆಗೆ ಒಳಪಡಿಸಿದ ಬಳಿಕ ಶುಕ್ರವಾರ ಬಂಧಿಸಲಾಯಿತು.
ತನಿಖೆಯಲ್ಲಿ ತಲ್ವಾರ್ ಅನೇಕ ಭಿನ್ನ ಹೇಳಿಕೆಗಳನ್ನು ಪೊಲೀಸರಿಗೆ ನೀಡಿದ್ದಾಗಿ ಹೇಳಲಾಗಿದೆ. ಡಾ. ತಲ್ವಾರ್ ಜತೆ ಕೆಲಸ ಮಾಡುತ್ತಿದ್ದು ಅವರ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರೆಂದು ಶಂಕಿಸಲಾಗಿರುವ ಡಾ.ಅನಿತಾ ದುರಾನಿ ಅವರನ್ನು ಕೂಡ ಬಂಧಿಸಲಾಗಿದ್ದು, ಅವರನ್ನು ಸಹಆರೋಪಿಯಾಗಿ ಹೆಸರಿಸಲಾಗಿದೆ. ಅರುಷಿ ತಾಯಿ ಡಾ| ನೂಪುರ್ ತಲ್ವಾರ್ ಅವರನ್ನೂ ಪೊಲೀಸರು ಪ್ರಶ್ನಿಸಿದ್ದಾರೆ.
ಅರುಶಿ ಕೊಲೆಗೆ "ಮರ್ಯಾದೆಯ ಕಾರಣದ ಹತ್ಯೆ" ಅಥವಾ "ಅತಿಯಾದ ವಾಂಛೆ" ಪ್ರೇರೇಪಣೆಯೆಂದು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಡಾ.ತಲ್ವಾರ್‌ನ ವಿವಾಹೇತರ ಸಂಬಂಧದ ಬಗ್ಗೆ ಅರುಶಿ ಹಾಗೂ ಹೇಮರಾಜ್ ತಿಳಿರುವುದು ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಇನ್ನೊಂದು ಕೋನದ ಪ್ರಕಾರ ಕೊಲೆಯಾದ ದಿನದಂದು ರಾಕೇಶ್, ಆಸ್ಪತ್ರೆಯಿಂದ ಮನೆಗೆ ಮರಳಿದ ವೇಳೆ ಅರುಷಿ ಮತ್ತು ಹೇಮರಾಜ್ ನೋಡಬಾರದ ರೀತಿಯಲ್ಲಿ ಒಟ್ಟಿಗಿರುವುದನ್ನು ಕಂಡು ಸಿಟ್ಟಿನಲ್ಲಿ ಕೊಲೆ ಮಾಡಲಾಗಿದೆ ಎಂದೂ ಹೇಳಲಾಗಿದೆ.
ನೊಯ್ಡಾದಲ್ಲಿ ಕಳೆದ ಶುಕ್ರವಾರ ತಮ್ಮ ನಿವಾಸದಲ್ಲಿ ಅರುಶಿ ಸತ್ತುಬಿದ್ದಿರುವುದು ಪತ್ತೆಯಾಗಿತ್ತು. ಆಕೆಯ ಹಣೆ, ಭುಜ ಮತ್ತು ಎದೆಗೆ ತಿವಿತದ ಗಾಯಗಳಾಗಿದ್ದು ಕಂಡುಬಂದಿತ್ತು. ಪೊಲೀಸರು ಅರುಶಿ ಕೊಲೆಯ ಬಗ್ಗೆ ಹೇಮರಾಜ್‌ನನ್ನು ತಕ್ಷಣಕ್ಕೆ ಶಂಕಿಸಿದರೂ, ತಲ್ವಾರ್ ಮನೆಯ ಮೇಲ್ಛಾವಣಿಯಲ್ಲಿ ಹೇಮರಾಜ್ ಶವ ಕೂಡ ಪತ್ತೆಯಾಗಿದ್ದು, ಪೊಲೀಸರಿಗೆ ಬಿಡಿಸಲಾಗದ ಒಗಟಾಗಿ ಪರಿಣಮಿಸಿತ್ತು.
|