ಕರ್ನಾಟಕ ವಿಧಾನಸಭಾ ಚುನಾವಣೆ ತನಕ ತಡೆಹಿಡಿಯಲು ಆದೇಶಿಸಿದ್ದ ಹೊಗೇನಕಲ್ ಯೋಜನೆಯನ್ನು ಮುಂದುವರಿಸುವಂತೆ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಮಗಾರಿಯನ್ನು ನಿಗದಿತ 2011ರೊಳಗೆ ಮುಗಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಅವರು ನಿರ್ದೇಶನ ಹೊರಡಿಸಿದ್ದಾರೆ.
ತಮಿಳ್ನಾಡು ಕರ್ನಾಟಕದ ಗಡಿಪ್ರದೇಶವಾಗಿರುವ ಹೊಗೇನಕಲ್‌ನಲ್ಲಿ ನಿರ್ಮಿಸಲುದ್ದೇಶಿಸುವ ನಿರಾವರಿ ಯೋಜನೆ ಇದಾಗಿದೆ. ಕಾವೇರಿ ನದಿನೀರು ಸಂಗ್ರಹದ ಈ ಯೋಜನೆ ಮೂಲಕ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಈ ಯೋಜನೆ ಮೂಲಕ ನೀರೊದಗಿಸುವುದು ಯೋಜನೆಯ ಉದ್ದೇಶ.
ಕಳೆದರಾತ್ರಿ ಸಚಿವಾಲಯದಲ್ಲಿ, ತನ್ನ ಪುತ್ರ ಹಾಗೂ ಸಚಿವ ಎಂ.ಕೆ.ಸ್ಟಾಲಿನ್ ನೇತೃತ್ವ ವಹಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯಾಡಳಿತ ಇಲಾಖೆಯ ಅವಲೋಕನ ಸಭೆಯು ಕರುಣಾನಿಧಿ ಅಧ್ಯಕ್ಷತೆಯಲ್ಲಿ ನಡೆದಿದ್ದು ಈ ವೇಳೆ ಯೋಜನೆಯನ್ನು ನಿಗದಿತ ವೇಳೆಯಲ್ಲಿ ಪೂರ್ಣಗೊಳಿಸಲು ಅವರು ಸೂಚನೆ ನೀಡಿದ್ದಾರೆ.
ಪ್ರಸ್ತುತ ಯೋಜನೆಯು ಕರ್ನಾಟಕ ಮತ್ತು ತಮಿಳ್ನಾಡಿನ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ಎರಡೂ ರಾಜ್ಯಗಳಲ್ಲೂ ಪ್ರತಿಭಟನೆಗಳು ನಡೆದಿದ್ದವು. ಬಳಿಕ ಕರುಣಾನಿಧಿ, ಕರ್ನಾಟಕದಲ್ಲಿ ಚುನಾಯಿತ ಸರಕಾರ ಅಸ್ತಿತ್ವದಲ್ಲಿಲ್ಲ ಕಾರಣ ನೀಡಿ ಯೋಜನೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಿದ್ದರು.
|