ಕೇಂದ್ರದಲ್ಲಿ ಯುಪಿಎ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ರಾಜಕೀಯದ ಮೇಲೆ ಕರ್ನಾಟಕದ ಚುನಾವಣೆ ಪ್ರಭಾವ ಬೀರುವುದಂತೂ ಸುಸ್ಪಷ್ಟ.
ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳನ್ನು ಗಳಿಸಿಕೊಳ್ಳುವುದು ಸಾಧ್ಯವಾದರೆ, ರೈತರ ಕೋಟಿ ಕೋಟಿ ಸಾಲ ಮನ್ನಾವು ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಭಾವಿಸುವ ಅದು ನಿಗದಿತ ಅವಧಿಗೆ ಚುನಾವಣೆಗೆ ಮುಂದಾಗುವ ಸಾಧ್ಯತೆಯಿದೆ. ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ದೊರೆಯದಿದ್ದರೆ, ಬೆಲೆ ಏರಿಕೆ ಬಿಸಿ, ಭಯೋತ್ಪಾದನೆ ಮುಂತಾದ ಸಂಗತಿಗಳು ಮತದಾರರ ಮೇಲೆ ಪ್ರಭಾವ ಬೀರಿವೆ ಎಂಬುದು ಹೈಕಮಾಂಡ್‌ಗೆ ಮನದಟ್ಟಾಗುತ್ತದೆ.
ಈ ಕಾರಣಕ್ಕೆ ಅವಧಿಗೆ ಮುನ್ನವೇ ಲೋಕಸಭೆ ವಿಸರ್ಜಿಸಿ ಲೋಕಸಭೆ ಚುನಾವಣೆಗೆ ಮುಂದಾಗುವುದೋ ಅಥವಾ ಜನರ ಕೋಪ ಶಮನಗೊಳ್ಳಲು ನಿಗದಿತ ಅವಧಿವರೆಗೆ ಕಾಯುವುದೋ ಎಂಬುದು ಕೇಂದ್ರೀಯ ಮಟ್ಟದ ನಾಯಕರ ಮನದಾಳದಲ್ಲಿರುವ ಸಂಗತಿ.
ಈಗಾಗಲೇ ಹಣದುಬ್ಬರ, ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿಹೋಗಿರುವ ಕಾಂಗ್ರೆಸ್, ಮುಂಬರುವ ಮಹಾ ಚುನಾವಣೆಗಳ ದಿನಾಂಕ ನಿರ್ಧರಿಸುವ ಮುನ್ನ ಜನರ ಓಲೈಕೆಗೊಂದು ಅಸ್ತ್ರ ಬೇಕಾಗಿದೆ. ಚತ್ತೀಸಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ಚುನಾವಣೆ ಜತೆಗೇ ಮಹಾ ಚುನಾವಣೆಯನ್ನೂ ಮುಂದಿನ ನವೆಂಬರ್ ತಿಂಗಳಲ್ಲಿ ಎದುರಿಸುವುದೋ ಅಥವಾ ನಿಗದಿತವಾಗಿ ಮುಂದಿನ ವರ್ಷದವರೆಗೆ ಕಾಯುವುದೋ ಎಂಬ ಬಗ್ಗೆ ಕಾಂಗ್ರೆಸಿನೊಳಗೆ ಚಿಂತನೆ ನಡೆಯುತ್ತಲೇ ಇದೆ.
ನವೆಂಬರ್‌ನಲ್ಲೇ ಚುನಾವಣೆಗೆ ಹೋಗುವ ಸಾಧ್ಯತೆಯ ಹಿಂದೆ ಒಂದು ಅಂಶವಿದೆ. ಅದೆಂದರೆ ಛತ್ತೀಸಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಇರುವುದು ಬಿಜೆಪಿ ಸರಕಾರ. ಅಲ್ಲಿ ಎದುರಾಗುವ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಬಹುದು ಎಂಬುದು ಅದರ ಲೆಕ್ಕಾಚಾರ. ಅದಾಗದಿದ್ದರೆ, ಹಣದುಬ್ಬರದ ಬಗ್ಗೆ ಟೀಕೆ ಎದುರಿಸುತ್ತಾ, ಒಂದಷ್ಟು ಕಾಲ ತಳ್ಳಿದರೆ, ಯುಪಿಎಯ ಅಧಿಕಾರಾವಧಿ ಅಂತ್ಯಗೊಳ್ಳುವ 2009 ಏಪ್ರಿಲ್ ವರೆಗೆ ಕಾಯುವುದು ಕೂಡ ಪರಿಗಣನೆಯಲ್ಲಿದೆ.
ಕರ್ನಾಟಕದಲ್ಲೇನಾದರೂ ಬಿಜೆಪಿಯೋ, ಜೆಡಿಎಸ್ಸೋ ಕಾಂಗ್ರೆಸಿಗಿಂತ ಹೆಚ್ಚು ಸ್ಥಾನ ಪಡೆದರೆ ಏನಾಗುತ್ತದೆ? ಹಣದುಬ್ಬರ, ಬೆಲೆ ಏರಿಕೆ ಮುಂತಾದವು ಖಂಡಿತಾ ಮತದಾರನ ಮೇಲೆ ಪ್ರಭಾವ ಬೀರಿದೆ ಎಂಬುದು ಕಾಂಗ್ರೆಸ್ ಅರಿವಿಗೆ ಬರುತ್ತದೆ. ಹೀಗಾಗಿ ಮತದಾರನ ಆಕ್ರೋಶ ತಣ್ಣಗಾಗುವವರೆಗೆ ಕಾಯುವ ಬಗ್ಗೆ ಅದು ಯೋಚಿಸಬಹುದು.
ಮಹಾ ಚುನಾವಣೆ ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ನೇರ ಹೋರಾಟವಾಗಿ ರೂಪುಗೊಳ್ಳಲಿದ್ದರೂ, ಬಿಎಸ್ಪಿ, ಎಸ್ಪಿ ಮತ್ತು ಎಡಪಕ್ಷಗಳು ಕಾಂಗ್ರೆಸ್ ಧಾವಂತಕ್ಕೆ ಎಷ್ಟರಮಟ್ಟಿಗೆ ಕಡಿವಾಣ ಹಾಕುತ್ತವೆ ಎಂಬುದು ಕೂಡ ಚಿಂತಿಸಬೇಕಾದ ವಿಚಾರ.
|