ಪ್ರತ್ಯೇಕ ಘಟನೆಗಳಲ್ಲಿ ಉತ್ತರಪ್ರದೇಶದ ಮುಜಾಫರ್‌ನಗರ ಮತ್ತು ಉನ್ನಾವ್ ಜಿಲ್ಲೆಗಳಲ್ಲಿ ನೀರಿನಲ್ಲಿ ಮುಳುಗಿ ಐದು ಮಕ್ಕಳು ಸಾವನ್ನಪ್ಪಿದ್ದಾರೆ.
ಮುಜಾಫರ್‌ನಗರದಲ್ಲಿ ಮೂವರು ಮಕ್ಕಳು ಕೃಷ್ಣನದಿಯನ್ನು ದಾಟಲು ಯತ್ನಿಸಿದಾಗ ಅವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನದಿ ಆಳವಿಲ್ಲ ಎಂದೆಣಿಸಿದ ಮಕ್ಕಳು ನದಿ ದಾಟಲು ಯತ್ನಿಸಿದ್ದರು. ಆದರೆ, ಈ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿದ್ದು, ನೀರಿನಾಳದಲ್ಲಿ ಸಿಲುಕಿಕೊಂಡ ಮಕ್ಕಳು ದಡ ತಲುಪರು ವಿಫಲರಾಗಿದ್ದಾರೆ.
ಮೂವರಲ್ಲಿ ಒಂದು ಮಗುವಿನ ದೇಹ ಪತ್ತೆಯಾಗಿದೆ. ಉಳಿದಿಬ್ಬರ ಪತ್ತೆಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಉನ್ನಾವ್ ಜಿಲ್ಲೆಯಲ್ಲಿ ಮಕ್ಕಳಿಬ್ಬರು ಅಸಿವನ್ ಪ್ರದೇಶದಲ್ಲಿ ಕೆರೆಯೊಂದರಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮುಳುಗಿದ್ದಾರೆ. ಈ ಮಕ್ಕಳನ್ನು ಕದ್ರಿಪುರ ಗ್ರಾಮದ ಅಂಶು ಮತ್ತು ಅಂಜಲಿ ಎಂಬುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
|