ಮಹಿಳಾ ಮೀಸಲಾತಿ ಮಸೂದೆ ಕುರಿತು ಮಂಗಳವಾರ ನಡೆದ ಪ್ರಥಮ ಸಂಸದೀಯ ಸಮಿತಿ ಸಭೆಯಲ್ಲಿ, ಮೀಸಲಾತಿಯ ಕುರಿತ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಭಾರೀ ವಾಗ್ಯುದ್ಧ ನಡೆಯಿತು.
ಕಾನೂನು ಮತ್ತು ಸುವ್ಯವಸ್ಥೆಯ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ, ಸಂಸತ್ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಕುರಿತ ಮಸೂದೆಯು ಕುರಿತು ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಘರ್ಷಣೆ ಉಂಟಾಯಿತು.
ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷದ ನಾಯಕರು ಮಸೂದೆಯನ್ನು ಅದು ಈಗ ಇರುವ ರೂಪದಲ್ಲೇ ಅಂಗೀಕರಿಸಲು ನಕಾರ ಸೂಚಿಸಿದ್ದರೆ, ಸಿಪಿಐ(ಎಂ)ನ ಬೃಂದಾ ಕಾರಟ್ ಮತ್ತು ಕಾಂಗ್ರೆಸ್‌ನ ಜಯಂತಿ ನಟರಾಜನ್ ಮುಂತಾದ ನಾಯಕರು ಅಬ್ಬರದ ಬೆಂಬಲ ಸೂಚಿಸಿದರು.
ಮಸೂದೆಯ ಬೆಂಬಲಿಗರು, ಹತ್ತುವರ್ಷಗಳಿಂದ ಮಸೂದೆಯು ನೆನೆಗುದಿಗೆ ಬಿದ್ದಿರುವುದಕ್ಕೆ ಮಸೂದೆಯನ್ನು ವಿರೋಧಿಸುವವರನ್ನು ತರಾಟೆಗೆ ತೆಗೆದುಕೊಂಡರು.
ಮಸೂದೆಯನ್ನು ಪ್ರಸ್ತುತ ರೂಪದಲ್ಲೇ ಅಂಗೀಕರಿಸಿದಲ್ಲಿ ಗ್ರಾಮೀಣ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂಬುದು ಇದರ ವಿರೋಧಿಗಳ ವಾದವಾಗಿದೆ.
|